ಮಂಗಳೂರು:ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್ ಚಿಕಿತ್ಸಾ ಕೇಂದ್ರವನ್ನಾಗಿ ಪರಿವರ್ತಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೊರೊನಾ ಸೋಂಕಿನ ಮುಂಜಾಗ್ರತೆ ಬಗ್ಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲೆಯ ಎಲ್ಲಾ ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರು ಮತ್ತು ವೈದ್ಯರೊಂದಿಗೆ ಸಭೆ ನಡೆಸಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ವೆನ್ಲಾಕ್ ಆಸ್ಪತ್ರೆಯ 250 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಕಟ್ಟಡವನ್ನು ಕೋವಿಡ್ ಪಾಸಿಟೀವ್ ರೋಗಿಗಳ ಚಿಕಿತ್ಸೆಗಾಗಿ ಮೀಸಲಿಡಲಾಗುವುದು. ಆಸ್ಪತ್ರೆಯ ಇಪ್ಪತ್ತು ಹಾಸಿಗೆಗಳ ಆಯುಷ್ ಕಟ್ಟಡದಲ್ಲಿ ಶಂಕಿತರನ್ನು ದಾಖಲಿಸುವುದು ಮತ್ತು ಈ ಪ್ರಕರಣದಲ್ಲಿ ಯಾವುದಾದರೂ ಪಾಸಿಟಿವ್ ಬಂದರೆ ಸೂಪರ್ ಸ್ಪೆಷಾಲಿಟಿ ಕಟ್ಟಡಕ್ಕೆ ವರ್ಗಾಯಿಸಲಾಗುವುದು ಎಂದರು.
ಈಗಾಗಲೇ ಆಸ್ಪತ್ರೆಯಲ್ಲಿ ಬೇರೆ ಬೇರೆ ಕಾಯಿಲೆಗಳ ಚಿಕಿತ್ಸೆಗಾಗಿ ಒಳರೋಗಿಗಳಾಗಿ ದಾಖಲಾಗಿರುವ ಸುಮಾರು 218 ರೋಗಿಗಳನ್ನು ಮೂರು ದಿನಗಳ ಒಳಗಡೆ ಸಮೀಪದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ವರ್ಗಾಯಿಸಲಾಗುವುದು. ಹೊರರೋಗಿ ಚಿಕಿತ್ಸೆಗೆ ಬರುವವರನ್ನು ಸಮೀಪದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಅಲ್ಲದೇ ಆರ್ಪಿಸಿಸಿ ಯಲ್ಲಿ ದಾಖಲಾದ 140 ಮಕ್ಕಳನ್ನು ಸಮೀಪದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ವರ್ಗಾಯಿಸಿ ಅದನ್ನು ಮುಂದಿನ ದಿನಗಳಲ್ಲಿ ಕೋವಿಡ್ ಚಿಕಿತ್ಸೆಗೆ ಉಪಯೋಗಿಸಲಾಗಿವುದು ಎಂದು ತಿಳಿಸಿದರು. ಇದೇ ವೇಳೆ ಸಂಸದ ನಳಿನ್ ಕುಮಾರ್ ಕಟೀಲ್, ದ.ಕ ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ಶಾಸಕ ಭರತ್ ಶೆಟ್ಟಿ ಉಪಸ್ಥಿತರಿದ್ದರು.