ಮಂಗಳೂರು:ನಗರದಲ್ಲಿ ಇತ್ತೀಚೆಗೆ ನಡೆದಿದ್ದ ಹಿಂಸಾಚಾರ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಿಐಡಿ ತನಿಖೆಗೆ ಸಿದ್ದರಾಮಯ್ಯ ವಿರೋಧ ಇಂದು ನಗರಕ್ಕೆ ಆಗಮಿಸಿ ಮಂಗಳೂರಿಗೆ ಭೇಟಿ ನೀಡಿರುವ ಅವರು, ವಿಮಾನ ನಿಲ್ದಾಣದಲ್ಲಿ ಮಾತನಾಡಿದದರು. ಸಿಐಡಿ ಇಲಾಖೆಯಲ್ಲಿ ಕೆಲಸ ಮಾಡುವವರು ಪೊಲೀಸರೇ. ಫೈರಿಂಗ್ ಕೂಡ ಮಾಡಿದ್ದು ಪೊಲೀಸರೇ. ಈಗ ಪ್ರಕರಣವನ್ನು ಪೊಲೀಸರಿಂದಲೇ ತನಿಖೆ ಮಾಡಿಸುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿದರು. ಅಲ್ಲದೆ, ಹಾಲಿ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಈ ಬಗ್ಗೆ ಹಿಂದೆಯೂ ಒತ್ತಾಯಿಸಿದ್ದೇವೆ. ಮುಂದೆಯೂ ಒತ್ತಾಯಿಸುತ್ತೇನೆ. ಅಸೆಂಬ್ಲಿಯಲ್ಲೂ ಈ ಬಗ್ಗೆ ಆಗ್ರಹಿಸುತ್ತೇನೆ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪನವರು ಸುಳ್ಳು ಹೇಳುತ್ತಾರೆ. ಅವರಿಗೆ ಸತ್ಯ ಹೇಳಲು ಗೊತ್ತಿಲ್ಲ. ಅವರು ಪೊಲೀಸನವರಿಗೆ ಸರ್ಟಿಫಿಕೇಟ್ ನೀಡುತ್ತಾರೆ. ಅವರು ಪ್ರಮುಖ ಸಾಕ್ಷಿನಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಸಂಸದ ತೇಜಸ್ವಿ ಸೂರ್ಯ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅವರ ಹೇಳಿಕೆಯಿಂದಲೇ ಅವರ ಮನಸ್ಥಿತಿ ಗೊತ್ತಾಗುತ್ತೆ. ಬಡವರು ಕೂಲಿ ಕಾರ್ಮಿಕರು ದಲಿತರನ್ನು ಅವರು ಪ್ರತಿನಿಧಿಸುತ್ತಿಲ್ಲ. ತೇಜಸ್ವಿ ಸೂರ್ಯ ಆರ್ಎಸ್ಎಸ್ ವ್ಯಕ್ತಿಯಾಗಿದ್ದು ದಲಿತರನ್ನ, ಶೂದ್ರರನ್ನು ಅವಕಾಶ ವಂಚಿತರನ್ನಾಗಿ ಮಾಡಿದವರನ್ನು ಅವರು ಪ್ರತಿನಿಧಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇನ್ನು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಮುಖ್ಯಮಂತ್ರಿಯಾಗಿದ್ದಾರೆ. ಇಲ್ಲಿನ ವಿಚಾರದಲ್ಲಿ ಅವರು ಸರ್ಕಾರದ ರಿಮೋಟ್ ಕಂಟ್ರೋಲ್ ಆಗಿದ್ದಾರೆ. ಅವರು ಕೂಡ ಪ್ರಚೋದನಕಾರಿ ಹೇಳಿಕೆ ನೀಡುತ್ತಾರೆ. ಅವರ ವಿರುದ್ಧವೂ ಪ್ರಕರಣ ದಾಖಲಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.