ಮಂಗಳೂರು:ಮಂಗಳೂರು ವಿವಿ ಪ್ರೊಪೆಸರ್ ರಾಯಚೂರು ವಿಶ್ವವಿದ್ಯಾಲಯದ ಕುಲಪತಿಯಾಗಲು ಲಂಚ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಭೆ ಸೇರಿದ ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು ಪ್ರೊಪೆಸರ್ ಅವರನ್ನು ಅಮಾನತುಗೊಳಿಸಿದ್ದು, ಈ ಪ್ರಕರಣದ ತನಿಖೆಯನ್ನು ನಿವೃತ್ತ ಜಿಲ್ಲಾ ನ್ಯಾಯಾಧೀಶರಿಂದ ನಡೆಸಲು ನಿರ್ಣಯಿಸಿದೆ.
ರಾಮಸೇನೆ ಸ್ಥಾಪಕಾಧ್ಯಕ್ಷ ಪ್ರಸಾದ್ ಅತ್ತಾವರ ಎಂಬಾತ ಮಂಗಳೂರು ವಿಶ್ವವಿದ್ಯಾಲಯದ ಪ್ರೊ. ಜಯಶಂಕರ್ ಅವರಿಗೆ ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಮಾಡುವೆ ಎಂದು ಹೇಳಿ 30 ಲಕ್ಷ ಲಂಚ ತೆಗೆದುಕೊಂಡಿದ್ದ. ಲಂಚ ತೆಗೆದುಕೊಂಡ ಬಳಿಕ ವಂಚನೆ ಮಾಡಿದ ಹಿನ್ನೆಲೆಯಲ್ಲಿ ಜಯಶಂಕರ್ ಅವರು ಪ್ರಸಾದ್ ಅತ್ತಾವರ ವಿರುದ್ದ ಪೊಲೀಸ್ ದೂರು ನೀಡಿದ್ದರು. ಇದಾದ ಬಳಿಕ ಪೊಲೀಸರು ಪ್ರಸಾದ್ ಅತ್ತಾವರನನ್ನು ಬಂಧಿಸಿದ್ದರು.
ಘಟನೆಯ ಬಳಿಕ ಮಂಗಳೂರು ವಿಶ್ವವಿದ್ಯಾಲಯದ ಮೈಕ್ರೊಬಯಲಾಜಿ ಪ್ರೊಪೆಸರ್ ಆಗಿರುವ ಜಯಶಂಕರ್ ಅವರಿಗೆ ನೀಡಲಾದ ಕಾಲೇಜು ಅಭಿವೃದ್ಧಿ ಸಮಿತಿಯ ಡೈರೆಕ್ಟರ್ ಹುದ್ದೆಯಿಂದ ತೆರವುಗೊಳಿಸಿ ವಿದೇಶಿ ವಿದ್ಯಾರ್ಥಿಗಳ ಸೆಲ್ನನ ಡೈರೆಕ್ಟರ್ ಆಗಿ ಹುದ್ದೆ ಬದಲಾವಣೆ ಮಾಡಿ ಮಂಗಳೂರು ವಿವಿ ಕುಲಪತಿ ಆದೇಶಿಸಿದ್ದರು.
ಈ ವಿಚಾರದ ಬಗ್ಗೆ ಇಂದು ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರ ಸಭೆ ನಡೆದಿದ್ದು, ಈ ಸಭೆಯಲ್ಲಿ ಪ್ರೊ. ಜಯಶಂಕರ್ ಅವರನ್ನು ತನಿಖೆ ಮುಗಿಯುವವರೆಗೆ ಅಮಾನತು ಮಾಡಲು ನಿರ್ಣಯಿಸಲಾಗಿದೆ. ಮತ್ತು ಈ ಬಗ್ಗೆ ನಿವೃತ್ತ ಜಿಲ್ಲಾ ನ್ಯಾಯಾಧೀಶರಿಂದ ತನಿಖೆ ನಡೆಸಲು ಸೂಚಿಸಲು ನಿರ್ಣಯಿಸಲಾಗಿದೆ. ಈ ವೇಳೆ, ಪ್ರೊ. ಜಯಶಂಕರ್ ಅವರಿಗೆ ಜೀವನಾಧಾರ ಭತ್ಯೆಯಾಗಿ ಅರ್ಧ ವೇತನ ನೀಡಲು ನಿರ್ಧರಿಸಲಾಗಿದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ - ಎಐಯುಡಿಎಫ್ ಮೈತ್ರಿಕೂಟದ 20 ಅಭ್ಯರ್ಥಿಗಳು ಜೈಪುರದ ಹೋಟೆಲ್‌ಗೆ ಸ್ಥಳಾಂತರ!