ಮಂಗಳೂರು: ನಗರದಲ್ಲಿ ಕುಡಿಯುವ ನೀರಿನ ಕೊರತೆ ಉದ್ಭವಿಸಿದ್ದು, ಶೀಘ್ರದಲ್ಲಿ ಮಳೆ ಬರಲು ದೇವರು ಅನುಗ್ರಹಿಸಬೇಕು ಎಂದು ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ವಿವಿಧ ದೇವಳಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ದೇವಿಗೆ ಪ್ರಾರ್ಥನೆ ಸಲ್ಲಿಸಿದ ಶಾಸಕ ವೇದವ್ಯಾಸ ಕಾಮತ್, ಮಧ್ಯಾಹ್ನದ ಮಹಾಪೂಜೆಯಲ್ಲಿ ಭಾಗವಹಿಸಿ ದೇವಿಯಲ್ಲಿ ಶೀಘ್ರ ಮಳೆಗಾಗಿ ಪ್ರಾರ್ಥಿಸಿದರು. ಈ ಸಂದರ್ಭ ಮಾತನಾಡಿದ ಶಾಸಕರು, ಸಂಕ್ರಮಣದ ಈ ಪರ್ವ ದಿನದಂದು ನಗರದ ಎಲ್ಲಾ ದೇವಸ್ಥಾನಗಳಲ್ಲಿ ಭಜಕರು, ಆಡಳಿತ ಮಂಡಳಿ ಸದಸ್ಯರು, ಪಕ್ಷದ ಕಾರ್ಯಕರ್ತರು ಸೇರಿ ಮಳೆಗಾಗಿ ದೇವರಲ್ಲಿ ವಿಶೇಷವಾಗಿ ಪ್ರಾರ್ಥಿಸಿದ್ದೇವೆ. ಮಂಗಳೂರಿಗೆ ಹೆಸರು ಬರಲು ಕಾರಣವಾಗಿರುವ ಮಂಗಳಾಂಬೆಯ ಸನ್ನಿಧಿಯಲ್ಲಿ ದೇವಿಗೆ ಪ್ರಾರ್ಥನೆ ಸಲ್ಲಿಸಿದ್ದೇವೆ. ಹಿಂದೆ ಈ ರೀತಿ ನೀರಿನ ಕೊರತೆಉಂಟಾದಾಗ ನಮ್ಮ ಹಿರಿಯರು ದೇವರನ್ನು ಪ್ರಾರ್ಥಿಸಿದಾಗ ಮಳೆ ಬಂದು ತೊಂದರೆಗಳು ದೂರವಾಗಿದ್ದವು ಎನ್ನುವುದು ನಮಗೆ ಗೊತ್ತೆ ಇದೆ. ಈಗ ಮಳೆಯಿಲ್ಲದೆ ನಾವು ಪಡುತ್ತಿರುವ ಸಂಕಟವನ್ನು ದೇವಿಯ ಮುಂದೆ ಹೇಳಿಕೊಂಡಿದ್ದೇವೆ. ದೇವಿ ಕಾಪಾಡುತ್ತಾಳೆ ಎನ್ನುವ ನಂಬಿಕೆ ಇದೆ ಎಂದು ಹೇಳಿದರು.