ಮಂಗಳೂರು: ದೇಹದ ಎಲ್ಲ ಅಂಗಾಂಗಗಳು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದರೂ ಕೆಲಸವಿಲ್ಲವೆಂದು ಕೊರಗಿ ಜೀವನ ವ್ಯರ್ಥ ಮಾಡುವ ಸಾಕಷ್ಟು ಮಂದಿ ಇದ್ದಾರೆ. ಇಂಥವರನ್ನು ಬಡಿದೆಬ್ಬಿಸಬಲ್ಲರು ಈ ವ್ಯಕ್ತಿ.! ಇವರ ದೇಹದ ಸೊಂಟದ ಕೆಳಗೆ ಸ್ವಾಧೀನವಿಲ್ಲ. ಹೀಗಿದ್ದರೂ ರಿಕ್ಷಾ ಚಾಲನೆ ಮಾಡುತ್ತಾ ಬದುಕು ರೂಪಿಸಿಕೊಳ್ಳುತ್ತಿದ್ದಾರೆ.
ಮಂಗಳೂರಿನಲ್ಲಿ ಎಲೆಕ್ಟ್ರಿಕ್ ಆಟೋ ರಿಕ್ಷಾ ಓಡಿಸುತ್ತಿರುವ ಸುಭಾಷ್ ನೋಡಲು ಸಾಮಾನ್ಯ ವ್ಯಕ್ತಿ. ಆದರೆ ಇವರು ಬದುಕು ಸಂಕಷ್ಟದಲ್ಲಿದೆ. ತಮ್ಮ ಸೊಂಟದ ಕೆಳಭಾಗದಲ್ಲಿ ಬಲ ಕಳೆದುಕೊಂಡಿದ್ದರೂ ಛಲ ಮಾತ್ರ ಬಿಟ್ಟಿಲ್ಲ. ನಗರದಲ್ಲಿ ರಿಕ್ಷಾ ಚಾಲನೆ ಮಾಡುವ ಮೂಲಕ ಹೊಟ್ಟೆಹೊರೆಯುವ ಕಾಯಕ ಮಾಡುತ್ತಿದ್ದಾರೆ. 2018 ರವರೆಗೆ ಸದೃಢರಾಗಿದ್ದ ಸುಭಾಷ್, ಆ ಬಳಿಕ ಸಂಭವಿಸಿದ ಅಪಘಾತವೊಂದರಿಂದ ಈ ದುಸ್ಥಿತಿಗೆ ತಲುಪಿದ್ದಾರೆ.
ಸುಭಾಷ್ ಅವರು ಸುಮಾರು ಏಳು ವರ್ಷಗಳ ಕಾಲ ಅರಬ್ ದೇಶದಲ್ಲಿ ದುಡಿದವರು. ಅಲ್ಲಿಂದ ತಾಯ್ನಾಡಿಗೆ ಮರಳಿ ಟಿಪ್ಪರ್ ಖರೀದಿಸಿ ಕೆಲಸ ಪ್ರಾರಂಭಿಸಿದ್ದರು. ಆದ್ರೆ ಈ ಕೆಲಸ ಅವರಿಗೆ ಅಷ್ಟೇನೂ ಲಾಭ ತಂದುಕೊಡಲಿಲ್ಲ. ನಂತರ ಕಲ್ಲಿದ್ದಲು ಸಾಗಾಟದ ಟ್ರಕ್ ಡ್ರೈವರ್ ಆದರು. ಆದರೆ ಆ ಒಂದು ದಿನ ಸುರಿದ ಜಡಿಮಳೆ ಚಾಲಕನನ್ನು ಕಷ್ಟಗಳ ಕೂಪಕ್ಕೆ ತಳ್ಳಿತು. ಟ್ರಕ್ನಲ್ಲಿ ಲೋಡ್ ಸಾಗಿಸುತ್ತಿದ್ದಾಗ ಮಳೆನೀರು ನಿಂತು ರಸ್ತೆ ಹಂಪ್ಸ್ ಕಾಣದೇ ವಾಹನ ಚಲಾಯಿಸಿದ್ದು, ಅವರ ಬೆನ್ನುಹುರಿ ಶಾಶ್ವತವಾಗಿ ಹಾನಿಗೀಡಾಗಿದೆ.
ವಾಹನ ಅಪಘಾತವಾದ ಸಂದರ್ಭದಲ್ಲಿ ಮಧ್ಯರಾತ್ರಿಯಾಗಿದ್ದರಿಂದ ಯಾರೂ ಇರಲಿಲ್ಲ. ಈ ವೇಳೆ ಸುಭಾಷ್ ಸೊಂಟದ ಬಲ ಕಳೆದುಕೊಂಡಿರುವುದು ಬಿಟ್ಟರೆ ಅವರಿಗೆ ಬೇರಾವುದೇ ಗಾಯಗಳಾಗಿರಲಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಗುಣಮುಖರಾಗಲಿಲ್ಲ. ಕೆಲಸ ಮಾಡದೆ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಸುಭಾಷ್, ತನ್ನ ತಾಯಿ ಕಷ್ಟಪಟ್ಟು ದುಡಿಯುವುದನ್ನು ಕಂಡು ಸುಮ್ಮನೆ ಕೂರಲಾಗದೆ ತಾನೂ ದುಡಿಯಬೇಕು ಎಂದು ನಿರ್ಧರಿಸಿದರು.
ಇದನ್ನೂ ಓದಿ:ಬಳ್ಳಾರಿ: ಆಟೋ ರಿಕ್ಷಾ ಓಡಿಸಿ ಜೀವನ ನಡೆಸುತ್ತಿರುವ ಅತಿಥಿ ಉಪನ್ಯಾಸಕ