ರಾಮಕುಂಜ:ಪರಶುರಾಮ ಸೃಷ್ಠಿಯ ತುಳುನಾಡಿನಲ್ಲಿ ದೈವಾರಾಧನೆ, ನಾಗಾರಾಧನೆ ಪರಂಪರೆಯಿಂದ ನಾಡು ಸಮೃದ್ಧವಾಗಿದೆ. ಇಲ್ಲಿನ ಜನರ ಬದುಕು ಸಾರ್ಥಕ ಕಂಡುಕೊಂಡಿದೆ ಎಂದು ಸುಬ್ರಹ್ಮಣ್ಯ ಸಂಪುಟ ನರಸಿಂಹಸ್ವಾಮಿ ಮಠಾಧಿಪತಿ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.
ಹಳೆನೇರೆಂಕಿಗುತ್ತು ಶ್ರೀಚಕ್ರವರ್ತಿ ಕೊಡಮಣಿತ್ತಾಯ ದೈವಸ್ಥಾನ ಮತ್ತು ಶ್ರೀ ಬ್ರಹ್ಮಬೈದರ್ಕಳ ಗರಡಿಯ ಆವರಣದಲ್ಲಿ ಶ್ರೀದೈವಗಳ ನೇಮೋತ್ಸವ ಹಾಗೂ ಬ್ರಹ್ಮಬೈದರ್ಕ ಜಾತ್ರೋತ್ಸವದ ಧರ್ಮ ಜಾಗೃತಿ ಸಭೆಯಲ್ಲಿ ಮಾತನಾಡಿದರು.
ದೈವಗಳ ನೇಮೋತ್ಸವ ಹಾಗೂ ಬ್ರಹ್ಮಬೈದರ್ಕ ಜಾತ್ರೋತ್ಸವದ ಧರ್ಮ ಜಾಗೃತಿ ಸಭೆ 40 ವರ್ಷಗಳಿಂದ ಇಲ್ಲಿ ನಿಂತು ಹೋಗಿದ್ದ ಧಾರ್ಮಿಕ ಕಾರ್ಯಗಳನ್ನು ದೈವಸ್ಥಾನಗಳ ಅಭಿವೃದ್ಧಿಯೊಂದಿಗೆ ಕಳೆದ ಹತ್ತು ವರ್ಷಗಳಿಂದ ಅದ್ಧೂರಿಯಾಗಿ ಜಾತ್ರೋತ್ಸವ ನೆರವೇರಿಸುತ್ತಾ ಬಂದಿರುವ ದೈವಸ್ಥಾನದ ಆಡಳಿತ ಮೊಕ್ತೇಸರ ಪುತ್ತೂರು ಎಸ್ ಕೆ ಆನಂದ್ ದಂಪತಿಯನ್ನು ಊರಿನವರ ಪರವಾಗಿ ಸನ್ಮಾನಿಸಿ ಆಶೀರ್ವಚನ ನೀಡಿದರು.
ತುಳುನಾಡು ಜನರ ನಿತ್ಯ ಜೀವನದಲ್ಲಿ ದೈವಗಳ ನಂಬಿಕೆ ಒಡನಾಟ ಅತ್ಯಂತ ನಿಕಟವಾಗಿದೆ. ದೈವೀ ಕಾರ್ಯಗಳು ಜನರನ್ನು ಧಾರ್ಮಿಕವಾಗಿ ಒಗ್ಗೂಡಿಸಿ ಸಾಮಾಜಿಕ ಸಾಮರಸ್ಯಕ್ಕೆ ಪ್ರೇರಣೆ ನೀಡಿ ದೇಶ ಭಕ್ತಿ, ರಾಷ್ಟ್ರ ಭಕ್ತಿಗೆ ಪ್ರೇರಣೆಯಾಗುತ್ತಿದೆ. ನಮ್ಮ ದೈವಗಳಿಗೆ ಅಂತಹ ಮಹಾನ್ ಶಕ್ತಿ ಇದೆ. ಎಸ್ ಕೆ ಆನಂದ ಆವರು ಪಾಳುಬಿದ್ದಿದ್ದ ಹಳೆನೇರೆಂಕಿ ಗುತ್ತಿನ ದೈವಗಸ್ಥಾನಗಳನ್ನ ಜೀರ್ಣೋದ್ಧಾರಗೊಳಿಸಿ ಇಲ್ಲಿ ಗತವೈಭವವನ್ನು ಮೆರೆಸಿದ್ದಾರೆಂದರು.
ಆ ಮೂಲಕ ಇಲ್ಲಿ ದೈವೀ ಶಕ್ತಿ ಹೆಚ್ಚುವುದರೊಂದಿಗೆ ಸಾವಿರಾರು ಜನ ಜಾತಿಮತ ಬೇಧವಿಲ್ಲದೆ ಸಾಮರಸ್ಯದಿಂದ ಬಾಳುವಂತಾಗಿದೆ ಎಂದು ಸ್ವಾಮೀಜಿ ಹೇಳಿದರು. ವೇದಿಕೆಯಲ್ಲಿ ದೇವಸ್ಥಾನದ ಆಡಳಿತ ಸಮಿತಿಯ ಪದಾಧಿಕಾರಿಗಳು ಮತ್ತು ಕಾರ್ಯಕ್ರಮದಲ್ಲಿ ಊರಿನ ಜನರು ಉಪಸ್ಥಿತರಿದ್ದರು.