ಮಂಗಳೂರು: ರಾಜ್ಯವಿಧಾನಸಭೆ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಕರಾವಳಿ ಜಿಲ್ಲೆಗೆ ಕಾಂಗ್ರೆಸ್ ಮತ್ತು ಬಿಜೆಪಿಯ ರಾಷ್ಟ್ರೀಯ ನಾಯಕರ ದಂಡು ಬರುತ್ತಿದೆ. ನಾಳೆ ಕಾಂಗ್ರೆಸ್ ರಾಷ್ಟ್ರೀಯ ಮುಖಂಡ ರಾಹುಲ್ ಗಾಂಧಿ ಮಂಗಳೂರಿಗೆ ಬರುತ್ತಿದ್ದಾರೆ. ಬೆಳಗ್ಗೆ ಉಡುಪಿ ಜಿಲ್ಲೆಯಲ್ಲಿ ಚುನಾವಣೆ ಪ್ರಚಾರ ನಡೆಸಲಿರುವ ರಾಹುಲ್ ಗಾಂಧಿ, ಅಪರಾಹ್ನ 3.30 ಕ್ಕೆ ಮಂಗಳೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಳ್ಳುವರು.
ನಗರದ ಹೊರವಲಯದ ಅಡ್ಯಾರ್ ನಲ್ಲಿನ ಸಹ್ಯಾದ್ರಿ ಕಾಲೇಜಿನ ಮೈದಾನದಲ್ಲಿ ಜರುಗುವ ಪ್ರಚಾರ ಸಭೆಯಲ್ಲಿ ರಾಹುಲ್ ಗಾಂಧಿ ಭಾಗವಹಿಸುವರು. ಅಡ್ಯಾರ್ ಸಹ್ಯಾದ್ರಿ ಕಾಲೇಜಿನ ಕಾಂಗ್ರೆಸ್ ಸಮಾವೇಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಆಗಮಿಸುವರು. ರಾಹುಲ್ ಗಾಂಧಿ ಕಾರ್ಯಕ್ರಮ ನಾಳೆ ನಡೆಯುವ ಹಿನ್ನೆಲೆಯಲ್ಲಿ ಅಡ್ಯಾರ್ ಸಹ್ಯಾದ್ರಿ ಕಾಲೇಜಿನ ಮೈದಾನದಲ್ಲಿ ಬಿರುಸಿನ ಪ್ರಚಾರ ನಡೆಯುತ್ತಿದೆ.
ನಿನ್ನೆಯಷ್ಟೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ನಡೆಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮತ್ತು ಮಂಗಳೂರಿನಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದರು.
ಇನ್ನು ಏಪ್ರಿಲ್ 29 ರಂದು ಬಿಜೆಪಿ ಮುಖಂಡ ಕೇಂದ್ರ ಗೃಹ ಸಚಿವ ಅಮಿತ್ ಶಾ ರೋಡ್ ಶೋ ನಡೆಸಲಿದ್ದಾರೆ. ಚುನಾವಣಾ ಘೋಷಣೆ ಆಗುವ ಮುನ್ನ ಮಂಗಳೂರಿನಲ್ಲಿ ಮಿನಿ ರೋಡ್ ಶೋ ನಡೆಸಿ ಸಂಚಲನ ಮೂಡಿಸಿದ್ದ ಅಮಿತ್ ಶಾ ಅವರು ಮತ್ತೆ ಏಪ್ರಿಲ್ 29 ಕ್ಕೆ ಮಂಗಳೂರಿಗೆ ಬಂದು ರೋಡ್ ಶೋ ನಡೆಸುವರು. ಏ.29 ರಂದು ಸಂಜೆ ನಗರದ ಕೊಟ್ಟಾರದಿಂದ ನಾರಾಯಣ ಗುರು ವೃತ್ತ ( ಲೇಡಿಹಿಲ್) ವರೆಗೆ ರೋಡ್ ಶೋ ಜರುಗಲಿದ್ದು, ನಂತರ ಅಲ್ಲಿ ನಡೆಯಲಿರುವ ಪ್ರಚಾರ ಸಭೆಯಲ್ಲಿ ಅಮಿತ್ ಶಾ ಭಾಷಣ ಮಾಡಲಿದ್ದಾರೆ.
ಮೇ 3 ರಂದು ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಆಗಮಿಸಿ ಬಿಜೆಪಿ ಅಭ್ಯರ್ಥಿಗಳ ಚುನಾವಣಾ ಪ್ರಚಾರ ನಡೆಸುವರು. ಮೇ 3 ರಂದು ನಗರದ ಹೊರವಲಯದ ಮೂಲ್ಕಿಯಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಮೂಡ ಬಿದಿರೆ ಕ್ಷೇತ್ರದಲ್ಲಿ ಇರುವ ಮೂಲ್ಕಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಗಡಿ ಭಾಗದಲ್ಲಿದ್ದು, ಎರಡು ಜಿಲ್ಲೆಯ ಬಿಜೆಪಿ ಕಾರ್ಯಕರ್ತರು,ಸಾರ್ವಜನಿಕರು ಭಾಗವಹಿಸಲು ಅನುಕೂಲವಾಗುವಂತೆ ಮೋದಿ ಕಾರ್ಯಕ್ರಮ ಆಯೋಜಿಸಲಾಗಿದೆ.
ರಾಜ್ಯದಲ್ಲಿ ಮೋದಿ 6 ದಿನ ಚುನಾವಣಾ ಪ್ರಚಾರ(ಬೆಂಗಳೂರು):ಏಪ್ರಿಲ್ 29 ರಿಂದ ಒಟ್ಟು 6 ದಿನ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ಕಾರ್ಯ ನಡೆಸುವರು. ಹಳೇ ಮೈಸೂರು, ಕಿತ್ತೂರ ಕರ್ನಾಟಕ, ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕದಲ್ಲಿ ಬಿಜೆಪಿ ಅಭ್ಯರ್ಥಿಗಳ ಪ್ರಚಾರ ಕೈಗೊಳ್ಳಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.