ಮಂಗಳೂರು :ಅಫ್ಘಾನಿಸ್ತಾನನಿಂದ ಜಿಲ್ಲೆಗೆ ಆಗಮಿಸಿರುವ ಏಳು ಮಂದಿಯೊಂದಿಗೆ ಇಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಚರ್ಚೆ ನಡೆಸಿದರು.
ಜಿಲ್ಲೆಗೆ ವಿವಿಧ ತಾರೀಕಿನಂದು ಸುಮಾರು 7 ಮಂದಿ ಅಫ್ಘಾನಿಸ್ತಾನದಿಂದ ಜಿಲ್ಲೆಗೆ ಬಂದಿದ್ದು, ಅವರನ್ನು ಉಳ್ಳಾಲದ ಉಳಿಯ ನಿವಾಸಿ ಮೆಲ್ವಿನ್ ಮೊಂತೆರೋ , ನಗರದ ಕೊಲ್ಯ ನಿವಾಸಿ ಪ್ರಸಾದ್ ಆನಂದ್, ಬಜ್ಪೆ ಕರಂಬಾರು ನಿವಾಸಿ ದಿನೇಶ್ ರೈ, ಮೂಡುಬಿದಿರೆ ಪಾಡ್ಯಾರಬೆಟ್ಟು ಜಗದೀಶ್ ಪೂಜಾರಿ, ಮೂಲ್ಕಿ ಪಡುಪಣಂಬೂರು ನಿವಾಸಿ ಡೆಸ್ಮಂಡ್ ಡೇವಿಡ್ ನಿವಾಸಿ, ಬಿಜೈ ನಿವಾಸಿ ಶ್ರವಣ್ ಅಂಚನ್ ಹಾಗೂ ಉಳ್ಳಾಲದ ಉಳಿಯ ನಿವಾಸಿ ಡೆಮ್ಸಿ ಮೊಂತೆರೋ ಎಂದು ಗುರುತಿಸಲಾಗಿದೆ. ಇವರೆಲ್ಲ ಕಾಬೂಲ್ನಲ್ಲಿನ ಮಿಲಿಟರಿ ಬೇಸ್(ನ್ಯಾಟೊ ಬೇಸ್)ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಇಂದು ಈ ಏಳೂ ಮಂದಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಗೆ ಆಗಮಿಸಿ ಕಮಿಷನರ್ ಜೊತೆ ಚರ್ಚೆ ನಡೆಸಿದರು. ಇತ್ತೀಚೆಗೆ ಮಂಗಳೂರು ವಿವಿಯಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದ 47 ಮಂದಿ ಅಫ್ಘಾನ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಸುರಕ್ಷತೆಯ ಭರವಸೆ ನೀಡಿದ್ದರು.
ಚರ್ಚೆ ಬಳಿಕ ಮಾಧ್ಯಮಗಳೊಂದಿಗೆ ಕಮಿಷನರ್ ಶಶಿಕುಮಾರ್ ಮಾತನಾಡಿ, ಇದೀಗ ತಾಯ್ನಾಡಿಗೆ ಮರಳಿ ಬಂದವರೆಲ್ಲ ನ್ಯಾಟೊ ಮಿಲಿಟರಿ ಬೇಸ್ನಲ್ಲಿ ಇದ್ದವರಾಗಿದ್ದಾರೆ. ಹೀಗಾಗಿ, ಹೊರಗಡೆ ಬೆಳವಣಿಗೆ ಯಾವುದೂ ಇವರ ಗಮನಕ್ಕೆ ಬಂದಿಲ್ಲ. ಇವರನ್ನು ಕ್ಯಾಂಪ್ ಅಧಿಕಾರಿಗಳು ಸುರಕ್ಷಿತವಾಗಿ ಕತಾರ್ ಮೂಲಕವೇ ತವರಿಗೆ ಕಳುಹಿಸಿ ಕೊಟ್ಟಿದ್ದಾರೆ ಎಂದರು.