ಮಂಗಳೂರು: ನಗರದಲ್ಲಿ ಮೊಬೈಲ್ ಕಳವು ನಡೆದ ಬಗ್ಗೆ ದೂರು ದಾಖಲಾದ ಎರಡು ಗಂಟೆಯೊಳಗೆ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಸಬ ಬೆಂಗ್ರೆ ಮುಹಮ್ಮದ್ ಸಫ್ವಾನ್ (19) ಮುಹಮ್ಮದ್ ಸುಹೈಲ್(19), ಮುಹಮ್ಮದ್ ಸರ್ಫರಾಜ್(18) ಬಂಧಿತ ಆರೋಪಿಗಳು.
ನಗರದ ಕರಂಗಲ್ಪಾಡಿಯಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರು ಮಲಗಿದ್ದಾಗ ಅವರ ಮೊಬೈಲ್‌ಗಳನ್ನು ಕಳವು ಮಾಡಿ ಇವರು ಪರಾರಿಯಾಗಿದ್ದರು. ಈ ಬಗ್ಗೆ ಸಂಜೆ ಪೊಲೀಸ್ ಠಾಣೆಯಲ್ಲಿ ಕೂಲಿ ಕಾರ್ಮಿಕರು ಪ್ರಕರಣ ದಾಖಲಿಸಿದ್ದರು.
ಕ್ಷಿಪ್ರವಾಗಿ ತನಿಖೆ ನಡೆಸಿದ ಮಂಗಳೂರು ಉತ್ತರ ಠಾಣೆಯ ಇನ್‌ಸ್ಪೆಕ್ಟರ್ ಗೋವಿಂದರಾಜುು.ಬಿ, ಸಬ್ ಇನ್‌ಸ್ಪೆಕ್ಟರ್‌ಗಳಾದ ಗುರುಕಾಂತಿ, ನಾಗರಾಜ್, ಹೆಡ್ ಕಾನ್‌ಸ್ಟೆಬಲ್‌ಗಳಾದ ಭರತ್, ವೆಲೆಂಟೈನ್ ಡಿಸೋಜ, ಕಾನ್‌ಸ್ಟೆಬಲ್ ತಿಪ್ಪ ರಡ್ಡೆಪ್ಪ ಅವರನ್ನು ಒಳಗೊಂಡ ತಂಡ ನಗರದ ಲಾಡ್ಜ್‌ನಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದೆ.
ಮುಹಮ್ಮದ್ ಸರ್ಫರಾಜ್ ವಿರುದ್ಧ ಈಗಾಗಲೇ ಎರಡು ಕಳವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಿಂದ ಕಳವಾದ 11 ಮೊಬೈಲ್‌ಗಳು ಸಹಿತ ಎರಡು ಬೈಕ್‌ಗಳನ್ನೂ ವಶಕ್ಕೆ ಪಡೆಯಲಾಗಿದ್ದು, ಆ ಬೈಕ್‌ಗಳ ಮಾಲಿಕತ್ವದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕಾರ್ಯಾಚರಣೆ ನಡೆಸಿದ ಇನ್‌ಸ್ಪೆಕ್ಟರ್ ಗೋವಿಂದರಾಜು ಹಾಗೂ ತಂಡದ ಕಾರ್ಯವನ್ನು ಮಂಗಳೂರು ಪೊಲೀಸ್ ಕಮೀಷನರ್ ವಿಕಾಸ್ ಕುಮಾರ್ ಶ್ಲಾಘಿಸಿದ್ದಾರೆ.