ಕರ್ನಾಟಕ

karnataka

ETV Bharat / state

ಹನಿಟ್ರ್ಯಾಪ್ ಬಲಿಯಾಗಿ 49 ಲಕ್ಷ ರೂ. ಕಳೆದುಕೊಂಡ ಜ್ಯೋತಿಷಿ : ಯುವತಿ ಸೇರಿ ಇಬ್ಬರು ಅರೆಸ್ಟ್​ - ಮಂಗಳೂರು ಪೊಲೀಸ್​

ಜ್ಯೋತಿಷಿ ಸಂಬಂಧಿಕರು ಹಾಗೂ ಸ್ನೇಹಿತರಿಂದ ಹಣ ಸಾಲ ಪಡೆದಿದ್ದು, ಆರೋಪಿಗಳು ಸುಲಿಗೆ ಮಾಡಿರುವ ಹಣದಿಂದ ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾರೆ. ಬರೋಬ್ಬರಿ 49 ಲಕ್ಷ ರೂ. ನೀಡಿದರೂ ಇವರ ಬೇಡಿಕೆ ನಿಲ್ಲದ ಹಿನ್ನೆಲೆ ಮಂಗಳೂರು ಪೊಲೀಸರಿಗೆ ಜ್ಯೋತಿಷಿ ದೂರು ನೀಡಿದ್ದಾರೆ..

ಯುವತಿ ಸೇರಿ ಇಬ್ಬರು ಅರೆಸ್ಟ್​
ಯುವತಿ ಸೇರಿ ಇಬ್ಬರು ಅರೆಸ್ಟ್​

By

Published : Jan 21, 2022, 2:31 PM IST

ಮಂಗಳೂರು: ಹನಿಟ್ರ್ಯಾಪ್ ಮಾಡಿ ಜ್ಯೋತಿಷಿಯಿಂದ ಹಂತ ಹಂತವಾಗಿ 49 ಲಕ್ಷ ರೂ. ಸುಲಿಗೆ ಮಾಡಿದ ಯುವತಿ ಸೇರಿದಂತೆ ಇಬ್ಬರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಕೊಡಗು ಜಿಲ್ಲೆಯ ಸೋಮವಾರ ಪೇಟೆಯ ಶನಿವಾರ ಸಂತೆ ಮೂಲದ, ಪ್ರಸ್ತುತ ಮಂಗಳೂರು ಮೇರಿಹಿಲ್ ನಿವಾಸಿ ಭವ್ಯಾ(30), ಹಾಸನ ಜಿಲ್ಲೆಯ ಅರಕಲಗೂಡು ತಾಲೂಕು ಮೂಲದ ಪ್ರಸ್ತುತ ಮಂಗಳೂರು ಮೇರಿಹಿಲ್ ನಿವಾಸಿ ಕುಮಾರ್ ಅಲಿಯಾಸ್ ರಾಜು (35) ಎಂಬುವರು ಬಂಧಿತ ಆರೋಪಿಗಳು.

ದಂಪತಿ ನಡುವಿನ‌ ಸಮಸ್ಯೆ ಪರಿಹಾರಕ್ಕೆ ಮಂಗಳೂರು ನಗರದ ಪದವಿನಂಗಡಿಯ ತಮ್ಮ ಮನೆಯಲ್ಲಿ ಪೂಜೆ ಮಾಡಿಸಬೇಕೆಂದು ಆರೋಪಿಗಳು ಚಿಕ್ಕಮಗಳೂರು ಮೂಲದ ಪುರೋಹಿತ, ಜ್ಯೋತಿಷಿಯನ್ನು ಕರೆಸಿದ್ದಾರೆ. ಬಳಿಕ ಆತನೊಂದಿಗೆ ಸಲಿಗೆಯಿಂದಿದ್ದ ವಿಡಿಯೋ, ಫೋಟೋ ಹಾಗೂ ಆಡಿಯೋಗಳನ್ನು ಇರಿಸಿ ಹನಿಟ್ರ್ಯಾಪ್ ಮಾಡಲಾಗಿದೆ.

ಆರೋಪಿಗಳ ಬಂಧನದ ಕುರಿತು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಮಾಹಿತಿ ನೀಡಿರುವುದು..

ಆರೋಪಿಗಳು ಆ ಬಳಿಕ ನಾಲ್ಕೈದು ತಿಂಗಳಿನಲ್ಲಿ ಮಾಧ್ಯಮದವರು, ಪೊಲೀಸರು ಹಾಗೂ ಮಹಿಳಾ ಸಂಘಟನೆಯವರು ಎಂದು ಹೇಳಿ ಜ್ಯೋತಿಷಿಗೆ ಬೆದರಿಕೆಯನ್ನೊಡ್ಡಿ ಹಣಕ್ಕೆ ಬೇಡಿಕೆಯಿರಿಸಿದ್ದಾರೆ ಎನ್ನಲಾಗಿದೆ.

ಹಣ ನೀಡದಿದ್ದರೆ ಹನಿಟ್ರ್ಯಾಪ್ ವಿಡಿಯೋ, ಫೋಟೋ ಹಾಗೂ ಆಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ‌. ಇದರಿಂದ ಜ್ಯೋತಿಷಿ ಹಂತ ಹಂತವಾಗಿ 15 ಲಕ್ಷ ರೂ. ನಗದು ಹಾಗೂ ಬ್ಯಾಂಕ್ ಖಾತೆಗೆ 34 ಲಕ್ಷ ರೂ. ಹಾಕಿದ್ದಾರೆ.

ಜ್ಯೋತಿಷಿ ಸಂಬಂಧಿಕರು ಹಾಗೂ ಸ್ನೇಹಿತರಿಂದ ಹಣ ಸಾಲ ಪಡೆದಿದ್ದು, ಆರೋಪಿಗಳು ಸುಲಿಗೆ ಮಾಡಿರುವ ಹಣದಿಂದ ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾರೆ. ಬರೋಬ್ಬರಿ 49 ಲಕ್ಷ ರೂ. ನೀಡಿದರೂ ಇವರ ಬೇಡಿಕೆ ನಿಲ್ಲದ ಹಿನ್ನೆಲೆ ಮಂಗಳೂರು ಪೊಲೀಸರಿಗೆ ಜ್ಯೋತಿಷಿ ದೂರು ನೀಡಿದ್ದಾರೆ.

ಆತ ನೀಡಿರುವ ದೂರಿನನ್ವಯ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದೀಗ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಹೆಚ್ಚಿನ‌ ತನಿಖೆಗೆ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ. ಜೊತೆಗೆ ಪ್ರಕರಣದ ತನಿಖೆಯನ್ನು ಸಿಸಿಬಿಗೆ ಒಪ್ಪಿಸಲಾಗಿದೆ.

ಜಾಹಿರಾತು:-ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details