ಮಂಗಳೂರು (ದಕ್ಷಿಣ ಕನ್ನಡ):ದೇಶದ ಅತೀ ದೊಡ್ಡ 17 ಮೃಗಾಲಯಗಳ ಪೈಕಿ ಒಂದಾಗಿರುವ ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನ ಪ್ರಾಣಿಗಳ ಸಂತಾನಾಭಿವೃದ್ಧಿಯಲ್ಲಿ ದೇಶದಲ್ಲೇ ನಂಬರ್ 1 ಎಂಬ ಗೌರವಕ್ಕೆ ಪಾತ್ರವಾಗಿದೆ. ಅದರಲ್ಲೂ ದೇಶದಲ್ಲಿ ಅಪರೂಪದ ಹುಲಿ, ಕಾಡು, ಶ್ವಾನ, ಕಾಳಿಂಗ, ರಿಯಾ ಜಾತಿಯ ಹಕ್ಕಿಯ ಸಂತಾನಾಭಿವೃದ್ಧಿಯಲ್ಲಿ ಪಿಲಿಕುಳ ಮೃಗಾಲಯ ಹೆಚ್ಚು ಪ್ರಸಿದ್ಧಿ ಪಡೆದಿದೆ.
ರಾಜ್ಯ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದಡಿ ಪಿಲಿಕುಳ ಮೃಗಾಲಯ ಬರುತ್ತದೆ. ಈ ಉದ್ಯಾನ 150 ಎಕರೆ ವ್ಯಾಪ್ತಿಯನ್ನು ಹೊಂದಿದೆ. ನಮ್ಮ ದೇಶದಲ್ಲಿ 164 ಮಾನ್ಯತೆ ಪಡೆದ ಮೃಗಾಲಯವಿದ್ದು, ಅದರಲ್ಲಿ ಒಟ್ಟು ಅತಿ ದೊಡ್ಡ 17 ಮೃಗಾಲಯಗಳು ಇದೆ. ಅದರಲ್ಲಿ ಮಂಗಳೂರಿನ ಪಿಲಿಕುಳ ಕೂಡ ಒಂದಾಗಿದೆ.
ಉದ್ಯಾನದಲ್ಲಿ ಈವರೆಗೆ ಒಟ್ಟು 15 ಕ್ಕೂ ಅಧಿಕ ಹುಲಿ ಮರಿಗಳ ಜನನವಾಗಿದೆ, ಇಲ್ಲಿ ಪ್ರಸ್ತುತ 12 ಹುಲಿಗಳಿವೆ. ಉಳಿದವುಗಳನ್ನು ಚೆನ್ನೈ, ರಿಲಯನ್ಸ್, ಬನ್ನೇರುಘಟ್ಟ ಸೇರಿದಂತೆ ಉಳಿದ ಮೃಗಾಲಯದೊಂದಿಗೆ ವಿನಿಮಯ ಮಾಡಲಾಗಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂ ಮೃಗಾಲಯದಿಂದ ತರಿಸಲಾದ ಅಳಿವಿನಂಚಿನಲ್ಲಿರುವ ಕಾಡು ಶ್ವಾನಗಳ ವರ್ಗಕ್ಕೆ ಸೇರಿದ 'ದೋಳ್ ' ಕೂಡ ಪಿಲಿಕುಳದಲ್ಲಿ ಸಂತಾನಾಭಿವೃದ್ಧಿಯಲ್ಲಿ ಯಶಸ್ಸು ಕಂಡಿದೆ. ಇಲ್ಲಿ ಕಾಡು ಶ್ವಾನಗಳ ಸಂಖ್ಯೆ 30 ದಾಟಿದೆ.
ಹುಲಿ, ಸಿಂಹ, ಚಿರತೆ, ಕಾಡು ನಾಯಿಗಳು, ಕತ್ತೆಕಿರುಬ, ನರಿಗಳು, ಹಿಪ್ಪೋಗಳು, ಮೊಸಳೆ, ಆಮೆ, ಪಕ್ಷಿಗಳು, ಜಿಂಕೆಗಳು, ಕೃಷ್ಣ ಮೃಗಗಳು , ಮುಂಗುಸಿ, ಕಾಡು ಬೆಕ್ಕುಗಳು, ಬೂದು ತೋಳಗಳು, ಅಳಿಲು ಸೇರಿದಂತೆ ಸುಮಾರು 1,440 ಪ್ರಾಣಿ ಪಕ್ಷಿಗಳು ಈ ಮೃಗಾಲಯದಲ್ಲಿ ಇದೆ. ಅಪರೂಪದ ಮತ್ತು ಅತಿ ಹೆಚ್ಚು ಪ್ರಾಣಿಗಳ ಸಂತಾನಾಭಿವೃದ್ಧಿಗೆ ಈ ಪ್ರದೇಶದ ಪೂರಕ ವಾತಾವರಣ ಕಾರಣವಾಗಿದೆ. ಅಳಿವಿನಂಚಿನಲ್ಲಿರುವ ಪ್ರಾಣಿಗಳ ಸಂರಕ್ಷಣೆ ಮತ್ತು ಸಂತಾನಾಭಿವೃದ್ಧಿಗೆ ಪಿಲಿಕುಳ ಹೆಸರುವಾಸಿಯಾಗಿದ್ದು, ಬೇರೆ ಮೃಗಾಲಯದಿಂದ ತರಿಸಲಾದ ಪ್ರಾಣಿ, ಪಕ್ಷಿಗಳು ತನ್ನ ಸಂತಾನಾಭಿವೃದ್ಧಿ ವೃದ್ಧಿಸುತ್ತಿರುವುದು ಈ ಮೃಗಾಲಯದ ವಿಶೇಷವಾಗಿದೆ. ಹಾವಿನ ಪ್ರಭೇದಗಳ ದೊಡ್ಡ ಸಂಗ್ರಹ ಪಿಲಿಕುಳದಲ್ಲಿದೆ.
ಭಾರತದಾದ್ಯಂತ ಪಿಲಿಕುಳ ಮತ್ತು ನಾನಾ ಮೃಗಾಲಯ ನಡುವೆ ವಿನಿಮಯ ಒಪ್ಪಂದಗಳಿವೆ. ಇಲ್ಲಿಂದ ಹುಲಿ, ಕಾಳಿಂಗ, ಹೆಬ್ಬಾವು ಸೇರಿದಂತೆ ನಾನಾ ಪ್ರಾಣಿ, ಪಕ್ಷಿಗಳನ್ನು ಕಳುಹಿಸಿಕೊಡಲಾಗುತ್ತದೆ. ಚೆನ್ನೈಯ ವಂಡಲೂರು ಮೃಗಾಲಯದಿಂದ ಬಿಳಿ ಹುಲಿ ತರಿಸಲಾಗಿದ್ದು, ಅವರಿಗೆ ಒಂದು ಬೆಂಗಾಲಿ ಹುಲಿ ನೀಡಲಾಗಿದೆ. ರಿಲಯನ್ಸ್ ಮೃಗಾಲಯಕ್ಕೆ 2 ಹುಲಿ, 2 ಚಿರತೆ ನೀಡಲಾಗಿದೆ. ಬನ್ನೇರುಘಟ್ಟ ಮೃಗಾಲಯಕ್ಕೆ ಪಿಲಿಕುಳದ ಒಂದು ಗಂಡು ಹುಲಿ ನೀಡಿ ಬದಲಿಗೆ ಹೆಣ್ಣು ಹುಲಿಯನ್ನು ಕರೆ ತರಲಾಗಿತ್ತು ಎನ್ನುತ್ತಾರೆ.