ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಬೃಹತ್ ಕೈಗಾರಿಕೆಗಳು ಕಾರ್ಯಾಚರಿಸುತ್ತಿವೆ. ಸಮುದ್ರ ತೀರದಲ್ಲಿ ಇರುವ ಜಿಲ್ಲೆಯಾಗಿರುವುದರಿಂದ ಇಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಸಂಸ್ಥೆಗಳು ಆಸಕ್ತಿ ವಹಿಸುತ್ತಿವೆ. ಇದೀಗ ಕಿನ್ನಿಗೋಳಿ ಸಮೀಪದಲ್ಲಿ ಬೃಹತ್ ಕೈಗಾರಿಕೆ ಸ್ಥಾಪನೆಗೆ ಮುಂದಾಗಿದ್ದು, ಇದಕ್ಕೆ ಮೂರು ಗ್ರಾಮಗಳ ಭೂಸ್ವಾಧೀನ ನಡೆಯಲಿದೆ.
ಕೈಗಾರಿಕೆಗಳ ಸ್ಥಾಪನೆಗೆ ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿರುವುದರಿಂದ ಮೂರು ಗ್ರಾಮಗಳ ಜನತೆ ಕಂಗಲಾಗಿದ್ದಾರೆ. ಕಿನ್ನಿಗೋಳಿ ಸಮೀಪದ ಉಳೆಪಾಡಿ, ಬಳ್ಕುಂಜೆ, ಕೊಲ್ಲೂರು ಈ ಮೂರು ಗ್ರಾಮಗಳ 1,091 ಎಕರೆ ಭೂಮಿ ಸ್ವಾಧೀನವಾಗಲಿದೆ. ಇದರಿಂದ ನೂರಾರು ಕುಟುಂಬಗಳು ತಮ್ಮ ಮೂಲ ನೆಲೆಯನ್ನು ಕಳೆದುಕೊಳ್ಳಲಿದ್ದಾರೆ.
ಕೈಗಾರಿಕೆ ಸ್ಥಾಪನೆಗೆ ಭೂಸ್ವಾಧೀನ: ಆತಂಕದಲ್ಲಿ ಜನತೆ ಮೂರೂ ಗ್ರಾಮಗಳ ಮನೆಮನೆಗೂ ಕೆಐಎಡಿಬಿ ನೋಟಿಸ್ ನೀಡುತ್ತಿದ್ದು, ಇದರ ಪರಿಣಾಮ ಈ ಗ್ರಾಮಗಳ ನಿವಾಸಿಗಳು ತಾವು ಹುಟ್ಟಿ ಬೆಳೆದ ಮನೆ, ಕಷ್ಟಪಟ್ಟು ದುಡಿದ ಕೃಷಿ ಭೂಮಿ ಎಲ್ಲವನ್ನೂ ತೊರೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಳ್ಕುಂಜೆ, ಕೊಲ್ಲೂರು, ಉಳೆಪಾಡಿ ಮೂರೂ ಗ್ರಾಮಗಳಲ್ಲಿ ಕೃಷಿ, ಹೈನುಗಾರಿಕೆಯೆ ಪ್ರಧಾನವಾಗಿದ್ದು, ಇದನ್ನೇ ಅವಲಂಬಿಸಿ ಬದುಕುತ್ತಿದ್ದಾರೆ. ತೆಂಗು, ಅಡಿಕೆ, ಕಬ್ಬು, ಉದ್ದು, ಹೆಸರು, ಬಾಳೆ, ಕರಿಮೆಣಸು, ಭತ್ತ, ಎಳ್ಳು, ಹಣ್ಣುಹಂಪಲುಗಳನ್ನು ಬೆಳೆದು ಸ್ವಾವಲಂಬಿಯಾಗಿ ಬದುಕುತ್ತಿರುವ ಇವರಿಗೆ ತಮ್ಮ ಆಸ್ತಿ-ಪಾಸ್ತಿ, ಕೃಷಿ ಭೂಮಿಯನ್ನೆಲ್ಲಾ ಬಿಟ್ಟು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ:ಕಲಬುರಗಿಯಲ್ಲಿ 'ಲೋಬಂಡಿ' ಜಾತ್ರೆ: ದರ್ಗಾದಿಂದ ಜಮೀನಿನಲ್ಲಿ 14 ಕಿ.ಮೀ ದೂರಕ್ಕೆ ಸಾಗುತ್ತೆ ಚಕ್ಕಡಿ
ಭೂಸ್ವಾಧೀನದಿಂದ ಇಲ್ಲಿನ ಜನರು ತಮ್ಮ ಹಿರಿಯರ ಕಾಲದಿಂದ ನಂಬಿಕೊಂಡು ಬಂದಿರುವ ದೈವಸ್ಥಾನಗಳು, ದೇವಸ್ಥಾನ, ಮಸೀದಿ, ಚರ್ಚ್ ಅವಶೇಷವಾಗುವ ಆತಂಕ ಎದುರಾಗಿದೆ. ತುಳುನಾಡಿನ ಕಾರಣಿಕ ಪುರುಷರಾದ ಕಾಂತಾಬಾರೆ-ಬೂದಬಾರೆಯರ ಜನ್ಮಸ್ಥಾನಕ್ಕೆ ಸಂಬಂಧಪಟ್ಟ ಗದ್ದೆ, ಭೂಮಿ, ತುಳುನಾಡಿನ ಮೂಲ ನಿವಾಸಿಗಳಾದ ಕೊರಗ ಸಮುದಾಯದವರು ಮತ್ತು ಅವರು ಆರಾಧಿಸುವ ಹಲವು ದೈವಗಳು ಇಲ್ಲಿದ್ದು, ದೇವಸ್ಥಾನ, ಮಸೀದಿ, ಚರ್ಚ್ ಗಳಿಗೂ ಕಂಟಕ ಎದುರಾಗಿದೆ. ಇದರಿಂದ ಕೊರಗ ಸಮುದಾಯದ 11 ಎಕರೆ ಕೃಷಿ ಭೂಮಿ, 42 ದೈವಗಳಿರುವ ದೈವಸ್ಥಾನಗಳು ಕಣ್ಮರೆಯಾಗುವ ಭೀತಿ ಎದುರಾಗಿದ್ದು, ಏನೇ ಆದರೂ ತಾವು ಯಾರೂ ಈ ಜಾಗವನ್ನು ಬಿಟ್ಟು ಹೋಗುವುದಿಲ್ಲ ಎಂದು ಇಲ್ಲಿನ ಜನರು ಪಟ್ಟು ಹಿಡಿದಿದ್ದಾರೆ.