ಮಂಗಳೂರು: ದ.ಕ ಜಿಲ್ಲೆಯಲ್ಲಿ ಸಾಕಷ್ಟು ಕಲಾವಿದರಿದ್ದರೂ ಅವರಿಗೆ ಸರಿಯಾದ ವೇದಿಕೆ ಇರಲಿಲ್ಲ ಎನ್ನುವ ಕೊರಗಿತ್ತು. ಸುಮಾರು ಐದಾರು ದಶಕಗಳಿಂದ ರಂಗಮಂದಿರಕ್ಕಾಗಿ ರಂಗಕರ್ಮಿಗಳು ಬೇಡಿಕೆ ಇಟ್ಟರೂ ಇನ್ನೂ ಈಡೇರಿಲ್ಲ. ಇದರಿಂದ ನಾಟಕ ಪ್ರಿಯರಿಗೆ ನಾಟಕ ನೋಡಲು ಬೇರೆ ಊರಿಗೆ ಹೋಗಬೇಕಾದ ಪರಿಸ್ಥಿತಿ ಎದುರಾಗಿತ್ತು. ಈ ನಿಟ್ಟಿನಲ್ಲಿ ರಂಗಾಸಕ್ತರಿಗಾಗಿ ನಗರದಲ್ಲಿ ವೀಕೆಂಡ್ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.
'ಪಾದುವ ಥಿಯೇಟರ್ ಹಬ್' ವತಿಯಿಂದ ನಾಟಕ ತಂಡಗಳಿಗೆವೀಕೆಂಡ್ ನಾಟಕ ಪ್ರದರ್ಶನಗಳಿಗೆ ವೇದಿಕೆ ಕಲ್ಪಿಸಿದ್ದು, ಈಗಾಗಲೇ ನಾಲ್ಕು ಶನಿವಾರ ನಾಲ್ಕು ನಾಟಕ ಪ್ರದರ್ಶನವಾಗಿದೆ. ಪಾದುವ ಕಾಲೇಜಿನ ಪ್ರಾಂಶುಪಾಲ ಫಾ.ಆಲ್ವಿನ್ ಸೆರಾವೋ ಹಾಗೂ ಹತ್ತಾರು ನಾಟಕ ಕರ್ಮಿಗಳ ಮುತುವರ್ಜಿಯಿಂದ ಈ ವೇದಿಕೆಯಲ್ಲಿ ಪ್ರತೀ ಶನಿವಾರ ಸಂಜೆ 6.30ಕ್ಕೆ ನಾಟಕ ಪ್ರದರ್ಶನ ವಾಗುತ್ತಿದೆ.
ಮಂಗಳೂರಿನಲ್ಲಿವೀಕೆಂಡ್ ನಾಟಕ ಪ್ರದರ್ಶನ ಪ್ರಾಯೋಗಿಕವಾಗಿ ಡಿಸೆಂಬರ್ ಕೊನೆಯವಾರದವರೆಗೆ ಈ ಪ್ರದರ್ಶನವನ್ನು ನಿಗದಿಪಡಿಸಲಾಗಿದ್ದರೂ ಜನವರಿಯಲ್ಲಿಯೂ ನಾಟಕ ಪ್ರದರ್ಶನಕ್ಕೆ ವೇದಿಕೆ ನೀಡಬೇಕೆಂದು ವಿವಿಧ ನಾಟಕ ತಂಡಗಳು ಬೇಡಿಕೆ ಇಟ್ಟಿದೆಯಂತೆ. ಅಲ್ಲದೆ ಪ್ರೇಕ್ಷಕರು ಇಂತಹ ನಾಟಕ ಪ್ರದರ್ಶನ ನಿರಂತರವಾಗಿ ನಡೆಸಿ ಎಂದು ಉತ್ತಮ ಪ್ರತಿಕ್ರಿಯೆ ಸಿಕ್ಕಿದೆಯಂತೆ.
ನಾಟಕವನ್ನು ಉಚಿತವಾಗಿ ಪ್ರದರ್ಶಿಲಾಗುತ್ತಿದ್ದು, ಪ್ರೇಕ್ಷಕರು ನಾಟಕದ ಕೊನೆಗೆ ಇರಿಸಿದ ಡಬ್ಬಕ್ಕೆ ತಮ್ಮ ಇಚ್ಚಾನುಸಾರ ಹಣವನ್ನು ಹಾಕಬಹುದು. ಲೈಟ್, ಸೌಂಡ್ ಸಿಸ್ಟಮ್ಗಳು ₹10ರಿಂದ 12 ಸಾವಿರ ರೂ. ಮೊತ್ತ ಭರಿಸಬೇಕಾಗುತ್ತದೆ. ಆದರೆ ಇಷ್ಟು ದೊಡ್ಡ ಮೊತ್ತವನ್ನು ಭರಿಸಲು ಸಾಧ್ಯವಾಗದ ನಾಟಕ ತಂಡಗಳಿಗೆಂದೇ ಈ ಥಿಯೇಟರ್ ಹಬ್ ಆರಂಭಿಸಲಾಗಿದೆ.
ಒಟ್ಟಿನಲ್ಲಿ ಇಂದಿನ ದಿನಗಳಲ್ಲಿ ನಾಟಕಗಳಿಗಾಗಿ ಇಂತಹ ಉತ್ತಮ ವೇದಿಕೆಯನ್ನು ಒದಗಿಸಿದ ಪಾದುವಾ ಥಿಯೇಟರ್ ಹಬ್ ರಂಗ ಚಟುವಟಿಕೆಗಳು ಮಂಗಳೂರಿನಲ್ಲಿ ಮತ್ತೆ ಗರಿ ಗೆದರುವಂತೆ ಮಾಡಿದೆ.