ಮಂಗಳೂರು:ರಾಜ್ಯದಲ್ಲಿ ಬೆಂಗಳೂರಿನಿಂದ ಹೊರಗೆ ಐಟಿ ಉದ್ಯಮ ಬೆಳೆಸಲು ದೊಡ್ಡ ಪ್ರಯತ್ನಗಳು ನಡೆಯುತ್ತಿದ್ದು, ಈ ಹಿನ್ನೆಲೆ ಮಂಗಳೂರನ್ನು ಅತ್ಯಂತ ಪ್ರಮುಖ ಕ್ಲಸ್ಟರ್ ಆಗಿ ಗುರುತಿಸಲಾಗಿದೆ ಎಂದು ಡಿಸಿಎಂ, ಐಟಿ-ಬಿಟಿ ಸಚಿವ ಡಾ. ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.
ನಗರದ ಕೊಡಿಯಾಲಬೈಲ್ನಲ್ಲಿರುವ ಓಶಿಯನ್ ಪರ್ಲ್ ಹೋಟೆಲ್ ಸಭಾಂಗಣದಲ್ಲಿ ನಡೆದ ಮಂಗಳೂರು ಆವಿಷ್ಕಾರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಮಂಗಳೂರಿನಲ್ಲಿ ಐಟಿ ಉದ್ಯಮಗಳು ನೆಲೆಯಾಗುವುದರ ಜೊತೆಗೆ, ನವೋದ್ಯಮದ ತಾಣವಾಗಿ ಬೆಳೆಯಲಿದೆ. ಇದಕ್ಕೆ ಬೇಕಾದ ಸಹಕಾರವನ್ನು ರಾಜ್ಯ ಸರ್ಕಾರ ನೀಡಲಿದೆ ಎಂದರು.
ಐಟಿ ಉದ್ಯಮದಲ್ಲಿ ಮಂಗಳೂರನ್ನು ಕ್ಲಸ್ಟರ್ ಆಗಿ ಗುರುತಿಸಲಾಗಿದೆ ಶಿಕ್ಷಣ ವ್ಯವಸ್ಥೆ, ವೈದ್ಯಕೀಯ ಸೇವೆ, ಕೈಗಾರಿಕೋದ್ಯಮ, ಪ್ರವಾಸೋದ್ಯಮ ಮುಂತಾದ ಪೂರಕ ಅಂಶಗಳನ್ನು ಪರಿಗಣಿಸಿ ಮಂಗಳೂರು ನಗರವನ್ನು ಆವಿಷ್ಕಾರ ಹಾಗೂ ಜಾಗತಿಕ ಕೇಂದ್ರವಾಗಿ ರೂಪಿಸಲಾಗುತ್ತದೆ. ಅಲ್ಲದೆ ಮಂಗಳೂರನ್ನು ಐಟಿ ಉದ್ಯಮದ ಜೊತೆಗೆ ಇಲೆಕ್ಟ್ರಾನಿಕ್ ಹಾಗೂ ಅಭಿವೃದ್ಧಿ ನಿರ್ವಹಣೆ ಕ್ಷೇತ್ರಗಳಲ್ಲಿಯೂ ಪ್ರಮುಖ ಕ್ಲಸ್ಟರ್ ಆಗಿ ಗುರುತಿಸಲಾಗಿದೆ ಎಂದರು.
ರಾಜ್ಯದ ಇತರ ಜಿಲ್ಲೆಗಳಲ್ಲಿ ಆವಿಷ್ಕಾರ ತಂತ್ರಜ್ಞಾನ ಹಾಗೂ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಕೆಡಿಎಂ ರಚಿಸಲಾಗಿದ್ದು, ಈ ಮೂಲಕ ರಾಜ್ಯದ ಆರ್ಥಿಕ ಶಕ್ತಿಯನ್ನು ವೃದ್ಧಿಸುವ ನಿಟ್ಟಿನಲ್ಲಿ ಕೆಡಿಎಂ ಕೆಲಸ ಮಾಡುತ್ತದೆ. ಈ ಮೂಲಕ ರಾಜ್ಯದಲ್ಲಿ ಮುಂದಿನ 5 ವರ್ಷಗಳಲ್ಲಿ 30 ಲಕ್ಷ ಹೆಚ್ಚುವರಿ ಉದ್ಯೋಗ ಸೃಷ್ಟಿಸುವ ಕಾರ್ಯಸೂಚಿಯನ್ನು ಅದು ಮಾಡುತ್ತದೆ. ಅಲ್ಲದೆ ಈ ಮೂಲಕ ರಾಜ್ಯದ ಐಟಿ ರಫ್ತು ವಹಿವಾಟು 150 ಲಕ್ಷ ಬಿಲಿಯನ್ ಡಾಲರ್ ಮೀರುವ ಗುರಿಯನ್ನು ಹೊಂದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ಪಿಎಫ್ಐ, ಎಸ್ಡಿಪಿಐ ಬೆಳವಣಿಗೆಗೆ ಕಾರಣವಾಗಿರುವ ಕಾಂಗ್ರೆಸ್ ಪಕ್ಷವೇ ಅವುಗಳ ಬಿ ಟೀಂ: ಅಶ್ವತ್ಥ ನಾರಾಯಣ