ಮಂಗಳೂರು: ಕೋವಿಡ್ ಎರಡನೇ ಅಲೆ ಆರಂಭವಾದಾಗಿನಿಂದ ಕೋವಿಡ್ ಪರೀಕ್ಷೆಗೆ ಒಳಗಾಗುವವರ ಸಂಖ್ಯೆ ಮೊದಲಿಗಿಂತಲೂ ಹೆಚ್ಚಾಗಿದೆ. ಕೊರೊನಾ ಪರೀಕ್ಷೆ ನಡೆಸುವುದು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿದ್ದರೂ ಖಾಸಗಿಯಲ್ಲಿ ಇದಕ್ಕೆ ದರ ವಿಧಿಸಲಾಗುತ್ತದೆ. ಆದರೆ ಈ ದರದ ಮೇಲೆ ಆರೋಗ್ಯ ಇಲಾಖೆ ನಿಯಂತ್ರಣವನ್ನಿಟ್ಟಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ತಿಳಿಸಿದ್ದಾರೆ.
ಕೊರೊನಾ ಪರೀಕ್ಷೆ ದರ ಕುರಿತು ಜಿಲ್ಲಾ ಆರೋಗ್ಯಾಧಿಕಾರಿ ಪ್ರತಿಕ್ರಿಯೆ ಸೋಂಕು ಮನುಷ್ಯನ ದೇಹಕ್ಕೆ ಹೊಕ್ಕಿದೆಯಾ ಎಂದು ತಿಳಿದುಕೊಳ್ಳಲು ಖಾಸಗಿ ಆಸ್ಪತ್ರೆಯಲ್ಲಿ ಬೇರೆ ಬೇರೆ ಪರೀಕ್ಷೆಗೆ ತಕ್ಕಂತೆ ದರಗಳಿದೆ. ರ್ಯಾಟ್ ಪರೀಕ್ಷೆಗೆ 400 ರೂ., ಆರ್ರ್ಟಿಪಿಸಿಆರ್ ಪರೀಕ್ಷೆಗೆ ರೂ. 800, ಎಕ್ಸ್ ರೇ ಮೂಲಕ ಪರೀಕ್ಷೆಗೆ ರೂ. 250, ಸಿಟಿ ಸ್ಕ್ಯಾನ್ಗೆ 2,500 ರೂ. ದರ ವಿಧಿಸಲು ಖಾಸಗಿ ಡಯಾಗ್ನಸ್ಟಿಕ್ ಸೆಂಟರ್ಗಳಿಗೆ ತಿಳಿಸಲಾಗಿದೆ. ಇನ್ನು ಬ್ಲ್ಯಾಕ್ ಫಂಗಸ್ ಪತ್ತೆ ಪರೀಕ್ಷೆಗೂ ಖಾಸಗಿ ಆಸ್ಪತ್ರೆಗಳಲ್ಲಿ ಇಂತಿಷ್ಟೇ ದರ ಪಡೆಯಬೇಕೆಂದು ನಿಗದಿಪಡಿಸಲಾಗಿದೆ ಎಂದು ಡಾ. ಕಿಶೋರ್ ಕುಮಾರ್ ಮಾಹಿತಿ ನೀಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಟು ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ ಮತ್ತು ಹಲವು ಖಾಸಗಿ ಡಯಾಗ್ನಸ್ಟಿಕ್ ಸೆಂಟರ್ಗಳಲ್ಲಿ ಕೋವಿಡ್ ಪರೀಕ್ಷೆಗೆ ವ್ಯವಸ್ಥೆ ಇದೆ. ಆದರೆ ಹಲವೆಡೆ ಸರ್ಕಾರ ನಿಗದಿಪಡಿಸಿದ ದರಕ್ಕಿಂತಲೂ ಹೆಚ್ಚಿನ ದರವನ್ನು ವಸೂಲು ಮಾಡಲಾಗುತ್ತಿದೆ ಎಂಬ ಆರೋಪಗಳಿದೆ.
ಇದನ್ನೂ ಓದಿ:ಕೋವಿಡ್ ಕಾಟಕ್ಕೆ ಸಂಕಷ್ಟದಲ್ಲಿ ಮನೆಗೆಲಸದವರು
ಈ ಬಗ್ಗೆ ಬಂದ ದೂರುಗಳ ಆಧಾರದಲ್ಲಿ ಆರೋಗ್ಯ ಇಲಾಖಾಧಿಕಾರಿಗಳು ಪರಿಶೀಲನೆ ನಡೆಸಿ ಎಚ್ಚರಿಕೆ ನೀಡಿದ್ದಾರೆ. ಜತೆಗೆ ರೋಗಿಗೆ ಬಿಲ್ ನೀಡುವ ಸಂದರ್ಭದಲ್ಲಿ ಯಾವ ರೀತಿಯ ಕೊರೊನಾ ಪರೀಕ್ಷೆ ಮಾಡಲಾಗಿದೆ ಮತ್ತು ಅದಕ್ಕೆ ವಿಧಿಸಿರುವ ದರವನ್ನು ನಮೂದಿಸಲು ಸೂಚಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನಡೆಯುವ ಕೊರೊನಾ ಪರೀಕ್ಷೆ ಮತ್ತು ಬ್ಲ್ಯಾಕ್ ಫಂಗಸ್ ಪತ್ತೆ ಮಾಡುವ ಪರೀಕ್ಷೆಯನ್ನು ಖಾಸಗಿ ಆಸ್ಪತ್ರೆಗಳಿಗೆ ನಿಗದಿತ ದರ ವಿಧಿಸಿ ಅವಕಾಶ ನೀಡಲಾಗಿದೆ. ಖಾಸಗಿ ಡಯಾಗ್ನಸ್ಟಿಕ್ ಸೆಂಟರ್ಗಳು ವಿಧಿಸುವ ದರದ ಮೇಲೆ ಆರೋಗ್ಯ ಇಲಾಖೆ ಸಂಪೂರ್ಣ ಕಣ್ಣಿಟ್ಟಿದೆ ಎಂದು ತಿಳಿಸಿದರು.