ಮಂಗಳೂರು (ದಕ್ಷಿಣ ಕನ್ನಡ) : ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮುರ ನಗರದ ಬಳಿ ವಾಹನದಲ್ಲಿ ಚರಸ್ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸುರತ್ಕಲ್ನ ಸೂರಿಂಜೆ ನಿವಾಸಿ ಅಬ್ದುಲ್ ಅಝೀಜ್(34) ಬಂಧಿತ ಆರೋಪಿ. ಈತನಿಂದ 7 ಲಕ್ಷ ರೂ. ಮೌಲ್ಯದ ಚರಸ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಬಜಪೆ ಠಾಣಾ ಪೊಲೀಸರು ಮುರ ನಗರದ ಬಳಿ ಬುಧವಾರ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ನಂಬರ್ ಪ್ಲೇಟ್ ಇಲ್ಲದ ಕಂದು ಬಣ್ಣದ ಸ್ವಿಫ್ಟ್ ಕಾರನ್ನು ಚಾಲಕನಿಗೆ ನಿಲ್ಲಿಸಲು ಸೂಚನೆ ನೀಡಿದ್ದಾರೆ. ಆದರೆ ಕಾರು ಚಾಲಕನು ಕಾರನ್ನು ನಿಲ್ಲಿಸದೇ ವೇಗವಾಗಿ ಚಲಾಯಿಸಿದ್ದಾನೆ. ಪರಿಣಾಮ, ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ನಿಂತಿದೆ. ತಕ್ಷಣ ಪೊಲೀಸರು ಕಾರಿನ ಬಳಿ ತೆರಳಿ ಓರ್ವನನ್ನು ಬಂಧಿಸಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ಮತ್ತೊಬ್ಬ ಪರಾರಿಯಾಗಿದ್ದಾನೆ.
ಬಳಿಕ ಪೊಲೀಸರು ಕಾರನ್ನು ಪರಿಶೀಲನೆ ಮಾಡಿದಾಗ 250 ಗ್ರಾಂ ಮಾದಕದ್ರವ್ಯ ಚರಸ್ ಪತ್ತೆಯಾಗಿದೆ. ಓಡಿ ಹೋದ ಮತ್ತೊಬ್ಬ ಆರೋಪಿ ಮೂಡುಬಿದಿರೆಯ ತೋಡಾರು ನಿವಾಸಿ ಕ್ಯಾಬರೇ ಫೈಜಲ್ ಎಂದು ತಿಳಿದು ಬಂದಿದೆ. ತಪ್ಪಿಸಿಕೊಂಡ ಮತ್ತೊಬ್ಬ ಆರೋಪಿ ಕ್ಯಾಬರೇ ಫೈಜಲ್ ಪತ್ತೆಯ ಬಗ್ಗೆ ಪೊಲೀಸರು ವ್ಯಾಪಕ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವರ ಬಗ್ಗೆ ಅಶ್ಲೀಲ ಕಮೆಂಟ್; ಆರೋಪಿ ಬಂಧನ : ಸಾಮಾಜಿಕ ಜಾಲತಾಣದಲ್ಲಿ ದೇವರ ಬಗ್ಗೆ ಆಶ್ಲೀಲವಾಗಿ ಬರೆದು ಕಮೆಂಟ್ ಮಾಡಿದ ಪ್ರಕರಣದ ಆರೋಪಿಯನ್ನು ಮಂಗಳೂರಿನ ಸೈಬರ್ ಇಕೋನಾಮಿಕ್ ಆ್ಯಂಡ್ ನಾರ್ಕೋಟಿಕ್ ಕ್ರೈಂ ಪೊಲೀಸ್ ಠಾಣೆ (ಸೆನ್) ಪೊಲೀಸರು ಬಂಧಿಸಿದ್ದಾರೆ. ನಗರದ ಕುಲಶೇಖರದ ಬಿಕರ್ನಕಟ್ಟೆಯ ಬಂಧಿತ ಆರೋಪಿ.
ಈತ ಇನ್ಸ್ಟಾಗ್ರಾಂ ನಲ್ಲಿ, ದೇವರ ಬಗ್ಗೆ ಅಶ್ಲೀಲವಾಗಿ ಬರೆದು ಕಮೆಂಟ್ ಮಾಡಿದ ಬಗ್ಗೆ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಇದೀಗಾ ಆರೋಪಿ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿನ ಆರೋಪಿ ಪತ್ತೆ ಕಾರ್ಯದಲ್ಲಿ ಮಂಗಳೂರು ನಗರ ಸನ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸತೀಶ್ ಎಂ ಪಿ ಅವರ ನೇತೃತ್ವದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿದ್ದರು.
ಮೂವರು ಡ್ರಗ್ ಪೆಡ್ಲರ್ ಬಂಧನ : ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಮೂವರು ಡ್ರಗ್ ಪೆಡ್ಲರ್ಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರು ಗ್ರಾಮದ ನಂದಾವರ ಬಸ್ತಿಗುಡ್ಡೆಯ ಮೊಹಮ್ಮದ್ ಹಫೀಝ್ (35), ನಂದಾವರದ ಅಮೀರ್ (34) ಹಾಗೂ ಪಾಣೆಮಂಗಳೂರು ದಾಸರಗುಡ್ಡೆಯ ಜಾಕೀರ್ ಹುಸೇನ್ (28) ಬಂಧಿತ ಆರೋಪಿಗಳು. ಬಂಧಿತರಿಂದ ಒಟ್ಟು 200 ಗ್ರಾಂ ತೂಕದ 10,00,000 ರೂ. ಮೌಲ್ಯದ ಎಂಡಿಎಂಎ, ಒಂದು ಮಾರುತಿ ಸ್ವಿಫ್ಟ್ ಕಾರು, 70,000 ರೂ. ಮೌಲ್ಯದ 3 ಮೊಬೈಲ್ ಫೋನ್, ಡಿಜಿಟಲ್ ತೂಕ ಮಾಪನವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 15,70,500 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ :ಮಂಗಳೂರು: ಕಾಲೇಜಿಗೆ ಹೋಗುವಾಗ ಖರ್ಚಿಗೆ ಹಣ ಕೊಡಲಿಲ್ಲವೆಂದು ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ