ಮಂಗಳೂರು: ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಆರೋಪಿಯಾಗಿದ್ದ ಹರೀಶ್ ಆಚಾರಿ ಎಂಬಾತನನ್ನು ಮಂಗಳೂರಿನ 1ನೇ ಹೆಚ್ಚುವರಿ ಎಫ್.ಟಿ.ಎಸ್.ಸಿ ನ್ಯಾಯಾಲಯ ಖುಲಾಸೆಗೊಳಿಸಿದೆ.
ಬಾಲಕಿ ತನ್ನ ತಾಯಿಯೊಂದಿಗೆ ಮಂಗಳೂರು ತಾಲೂಕು, ಕಾಟಿಪಳ್ಳ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಮನೆಯ ಪಕ್ಕದಲ್ಲಿ ಆರೋಪಿ ಬಾಡಿಗೆ ಮನೆಯಲ್ಲಿದ್ದ. ಬಾಲಕಿ ಜೊತೆ ಬಹಳ ಸಲುಗೆಯಿಂದ ಮಾತನಾಡಿಕೊಂಡು, 'ನಿನ್ನನ್ನು ಮದುವೆ ಆಗುತ್ತೇನೆ, ಪ್ರೀತಿಸುತ್ತೇನೆ' ಎಂದೆಲ್ಲಾ ಪುಸಲಾಯಿಸಿ, ನಂಬಿಸಿದ್ದಾನೆ. ಒಂದು ದಿನ ವಠಾರದಲ್ಲಿ ಯಾರೂ ಇಲ್ಲದ ವೇಳೆ ಬಾಲಕಿ ಬೇಡವೆಂದರೂ ಮದುವೆ ಆಗುತ್ತೇನೆಂದು ಹೇಳಿ ಅತ್ಯಾಚಾರ ಎಸಗಿದ್ದ ಎಂದು ಆರೋಪಿಸಲಾಗಿತ್ತು.
ಗರ್ಭ ಧರಿಸಿದ ವಿಚಾರ ತಿಳಿದು ತಾಯಿ ಬೈದಾಗ ಬಾಲಕಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು. ಆಗ ಅಲ್ಲಿದ್ದ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದರು. ಆಸ್ಪತ್ರೆಯಲ್ಲಿ ವಿಚಾರಿಸಿದಾಗ ತನ್ನ ಮೇಲೆ ಅತ್ಯಾಚಾರವಾಗಿರುವ ವಿಷಯ ತಿಳಿಸಿದ್ದಾಳೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿತ್ತು.
ಆರೋಪಿ ವಿರುದ್ಧ ಪ್ರಕರಣ ದಾಖಲಾಗಿ, ಮಂಗಳೂರು ಉತ್ತರ ವಿಭಾಗ ಸಹಾಯಕ ಪೊಲೀಸ್ ಆಯುಕ್ತ ಮದನ್ ಎ ಗಾಂವಕರ ಅವರು ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಎಫ್.ಟಿ.ಎಸ್.ಸಿ ನ್ಯಾಯಾಧೀಶೆ ಮಂಜುಳಾ ಇಟ್ಟಿ, ಎರಡೂ ಕಡೆಯ ವಾದ-ಪ್ರತಿವಾದಗಳನ್ನು ಆಲಿಸಿ ಆರೋಪವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂಬುದನ್ನು ಮನಗಂಡು ಆರೋಪಿಯನ್ನು ದೋಷಮುಕ್ತಗೊಳಿಸಿದ್ದಾರೆ. ಆರೋಪಿ ಪರ ವಕೀಲ ವೇಣುಕುಮಾರ್ ಮತ್ತು ಯುವರಾಜ್ ಕೆ ಅಮೀನ್ ವಾದಿಸಿದ್ದರು.
ಇದನ್ನೂ ಓದಿ:ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: ಬಾಲಕಿ ತಾಯಿ ಸಮೇತ ಮೂವರಿಗೆ ಶಿಕ್ಷೆ