ಉಳ್ಳಾಲ:'ಎಲ್ಲರೂ ಮಾಸ್ಕ್' ಹಾಕಿ ಎಂದು ಗದರಿದ ಅಜ್ಜನ ಕಾಳಜಿ ಕಂಡು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು ಸೀಯಾಳ ನೀಡಿ ಉಪಚರಿಸಿದರು.
ತೊಕ್ಕೊಟ್ಟು ಒಳಪೇಟೆಯ ಅಂಗಡಿಯೊಂದರಲ್ಲಿ ಸೀಯಾಳ ಕುಡಿಯಲು ಪೊಲೀಸ್ ಕಮಿಷನರ್ ಶಶಿಕುಮಾರ್ ಮತ್ತು ಅವರ ತಂಡ ನಿಂತಿತ್ತು. ಈ ಸಂದರ್ಭ ಸ್ಥಳಕ್ಕೆ ಬಂದ ಅಜ್ಜ ಸಾರ್ವಜನಿಕವಾಗಿ ಎಲ್ರೂ ಮಾಸ್ಕ್ ಹಾಕ್ರಿ ಎಂದು ಬೊಬ್ಬೆ ಹೊಡೆದಿದ್ದಾರೆ. ಪೊಲೀಸರನ್ನು ಪರೋಕ್ಷವಾಗಿ ಎಚ್ಚರಿಸಿದರಾದರೂ ತಾತನ ಕಾಳಜಿಗೆ ಕಮಿಷನರ್ ಕೂಡಾ ಮಾಸ್ಕ್ ಮುಖಕ್ಕೆ ಏರಿಸಿಕೊಂಡು ತಾತನ ಆಲಿಂಗಿಸಿ ಸೀಯಾಳ ಕೊಟ್ಟು ಉಪಚರಿಸಿದ್ದಾರೆ.
ತೊಕ್ಕೊಟ್ಟು ಒಳಪೇಟೆಯಲ್ಲಿ ಮಾಂಸದಂಗಡಿಗಳಿಗೆ ಬೆಂಕಿ ಹಚ್ಚಿದ ಪ್ರಕರಣದ ಕುರಿತಂತೆ ಘಟನಾ ಸ್ಥಳಕ್ಕೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್, ಡಿಸಿಪಿ, ಎಸಿಪಿ, ಉಳ್ಳಾಲ ಪಿಐ ಒಳಗೊಂಡಿದ್ದ ತಂಡವು ಪರಿಶೀಲನೆ ನಡೆಸಲು ಆಗಮಿಸಿದ್ದರು. ಈ ಸಂದರ್ಭ ಒಳಪೇಟೆಯ ಅಂಗಡಿಯೊಂದರಲ್ಲಿ ಸೀಯಾಳ ಕುಡಿದು ಮಾಸ್ಕ್‌ನ್ನು ಕತ್ತಿಗೆ ಜಾರಿಸಿಕೊಂಡು ಮಾತುಕತೆಯಲ್ಲಿ ತೊಡಗಿದ್ದರು.
ಇದೇ ವೇಳೆ, ಸ್ಥಳಕ್ಕೆ ಬಂದ ಅಜ್ಜ ಸಾರ್ವಜನಿಕವಾಗಿ ಮಾಸ್ಕ್ ಹಾಕ್ರಿ ಎಂದು ಏಕಾಏಕಿ ಸ್ವರ ಏರಿಸಿದ್ದಾರೆ. ಕೂಡಲೇ ಕಮಿಷನರ್, ಡಿಸಿಪಿಯವರು ಕತ್ತಲ್ಲಿದ್ದ ಮಾಸ್ಕನ್ನು ಮುಖಕ್ಕೆ ಏರಿಸಿದ್ದಾರೆ. ಸುರಕ್ಷಾದ ಮೂಲಕ ಸಾರ್ವಜನಿಕವಾಗಿ ಜಾಗೃತಿ ಮೂಡಿಸುವ ಮೂಲಕ ಮಂಗಳೂರು ಕಮಿಷನರ್ ಗ್ರಾಮೀಣ ಭಾಗದಲ್ಲೂ ಸಂಚಲನ ಮೂಡಿಸಿದ್ದು, ಮಾಸ್ಕ್‌ನ ಬಗ್ಗೆ ಕಳಕಳಿ ಮೂಡಿಸಿದ ಅಜ್ಜನನ್ನು ಆಲಂಗಿಸಿ ಸೀಯಾಳ ಕೊಟ್ಟು ಉಪಚರಿಸಿದ್ದಾರೆ.