ಮಂಗಳೂರು: ಲಾಕ್ಡೌನ್ ಸಡಿಲಿಕೆ ಬಳಿಕ ನಗರದ ಕೇಂದ್ರ ಮಾರುಕಟ್ಟೆಲ್ಲಿ ಆ. 13ರಿಂದ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡಲಾಗಿತ್ತು. ಇದೀಗ ಮುಂದಿನ ಆದೇಶದವರೆಗೆ ಮತ್ತೆ ಮಾರುಕಟ್ಟೆ ಮುಚ್ಚುವಂತೆ ದ.ಕ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಆದೇಶಿಸಿದ್ದಾರೆ.
ಮಂಗಳೂರು ಕೇಂದ್ರ ಮಾರುಕಟ್ಟೆ ಮತ್ತೆ ಬಂದ್
ಮಂಗಳೂರಿನ ಕೇಂದ್ರ ಮಾರುಕಟ್ಟೆ ತೆರೆದ ಒಂದೇ ವಾರದಲ್ಲಿ ಮತ್ತೆ ಮುಚ್ಚುವಂತಾಗಿದೆ. ಅಲ್ಲದೆ ಈ ಹಿಂದೆ ವರ್ತಕರು ವ್ಯಾಪಾರ ವಹಿವಾಟು ನಡೆಸುತ್ತಿದ್ದ ಬೈಕಂಪಾಡಿಯ ಎಪಿಎಂಸಿಯಲ್ಲಿ ವ್ಯಾಪಾರ ಮುಂದುವರಿಸಬೇಕು ಎಂದು ದ.ಕ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಆದೇಶಿಸಿದ್ದಾರೆ.
ಕೊರೊನಾ ಪ್ರಕರಣಗಳನ್ನು ನಿಯಂತ್ರಣಕ್ಕೆ ತರಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಮಾರುಕಟ್ಟೆಯಲ್ಲಿ ಕೆಲಸ ಮಾಡುವಂತಹ ಬೆರಳೆಣಿಕೆಯಷ್ಟಿರುವ ಮಾಲೀಕರು, ಕೂಲಿ ಕಾರ್ಮಿಕರು ಮತ್ತು ಗ್ರಾಹಕರು ಮಾಸ್ಕ್ ಧರಿಸಿ ಓಡಾಡುತ್ತಿದ್ದಾರೆ.
ಜೊತೆಗೆ ಮಾರುಕಟ್ಟೆಯಲ್ಲಿರುವ ಮಾಂಸದ ಅಂಗಡಿಗಳಿಗೆ ಸಮರ್ಪಕವಾದ ವ್ಯವಸ್ಥೆ ಇಲ್ಲದಿರುವುದರಿಂದ ಶುಚಿತ್ವ ಕಾಪಾಡುವುದು ಕಷ್ಟಕರವಾಗಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವುದನ್ನು ತಡೆಗಟ್ಟುವುದು ಅತ್ಯಂತ ಅಗತ್ಯವಾಗಿದೆ. ಈ ಮೂಲಕ ಕೇಂದ್ರ ಮಾರುಕಟ್ಟೆ ಸುತ್ತಮುತ್ತ ಹೆಚ್ಚಿನ ಜನರು ಸೇರದಂತೆ ಕ್ರಮ ವಹಿಸುವುದು ಅನಿವಾರ್ಯವಾಗಿದೆ ಎಂದಿದ್ದಾರೆ.