ಮಂಗಳೂರು: ಗಣರಾಜ್ಯೋತ್ಸವ ವೇಳೆ ಕೇಂದ್ರ ಸರ್ಕಾರ ನೀಡುವ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ದಕ್ಷಿಣಕನ್ನಡದ ಭರತನಾಟ್ಯ ಕಲಾವಿದೆ ರೆಮೋನಾ ಪಿರೇರಾಗೆ ಒಲಿದಿದೆ. ಇಂದು ಪ್ರಧಾನಿ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಅಭಿನಂದಿಸಿದ ಬಳಿಕ ಆಕೆಯೊಂದಿಗೆ ಮಾತನಾಡಿದರು.
ಭರತನಾಟ್ಯ ಕಲಾವಿದೆ ರೆಮೋನಾ ಪಿರೇರಾಗೆ ಒಲಿದ ರಾಷ್ಟ್ರೀಯ ಬಾಲ ಪುರಸ್ಕಾರ ನಗರದ ಜಿ.ಪಂ ಸಭಾಂಗಣದಲ್ಲಿ ನಡೆದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ತಾಯಿ ಹಾಗೂ ಸೋದರನೊಂದಿಗೆ ಪಾಲ್ಗೊಂಡಿದ್ದ ರೆಮೋನಾ, ಪ್ರಧಾನಿ ಜೊತೆ ಮಾತುಕತೆ ನಡೆಸಿದರು.
3ನೇ ವಯಸ್ಸಿನಿಂದಲೇ ನೃತ್ಯಾಭ್ಯಾಸದಲ್ಲಿ ತೊಡಗಿಸಿಕೊಂಡಿದ್ದೀರಿ, ಹೇಗೆ ಅಭ್ಯಾಸ ಮಾಡಿದ್ದೀರಿ? ನೀವೇ ಸ್ವಯಂ ಆಗಿ ಅಭ್ಯಾಸ ಮಾಡುತ್ತಿದ್ದೀರಾ ಅಥವಾ ಹೆತ್ತವರು ಕಾಳಜಿ ವಹಿಸಿದ್ದರೆ ಎಂದು ಪ್ರಧಾನಿ ಪ್ರಶ್ನಿಸಿದಾಗ, ನನ್ನ ತಾಯಿಗೆ ಭಾರತೀಯ ಸಂಸ್ಕೃತಿ ಬಗ್ಗೆ ತುಂಬಾ ಆಸಕ್ತಿ ಇದೆ. ಹಾಗಾಗಿ ಇದರಲ್ಲಿ ನಾನೂ ಆಸಕ್ತಿ ಬೆಳೆಸಿಕೊಂಡೆ ಎಂದು ರೆಮೋನಾ ಉತ್ತರಿಸಿದರು.
ಚಿಕ್ಕಂದಿನಲ್ಲಿ ಯಾವುದಾದರೂ ಕಠಿಣ ಪರಿಸ್ಥಿತಿ ಎದುರಾಗಿತ್ತೆ ಎಂದು ಪ್ರಧಾನಿಯವರು ಕೇಳಿದಾಗ ಉತ್ತರಿಸಿದ ರೆಮೋನಾ, ನಾನು ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡೆ. ಹೀಗಾಗಿ ನಮ್ಮನ್ನು ಸಾಕಲು ತಾಯಿ ಬಹಳ ಕಷ್ಟಪಟ್ಟರು. ಕಷ್ಟದಲ್ಲೇ ಓದಿಸುತ್ತಿದ್ದಾರೆ. ಅದರ ನಡುವೆ ನೃತ್ಯ ತರಬೇತಿಗೂ ಸೇರಿಸಿದರು ಎನ್ನುತ್ತಿದ್ದಂತೆ ರೆಮೋನಾ ತಾಯಿಗೂ ಮೋದಿ ನಮಸ್ಕರಿಸಿದರು.
ಇದನ್ನೂ ಓದಿ:31 ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕ: ನಿಮ್ಮ ಜಿಲ್ಲೆಗೆ ಯಾರು?..ಇಲ್ಲಿದೆ ಲಿಸ್ಟ್
2022ನೇ ಸಾಲಿನ ರಾಷ್ಟ್ರೀಯ ಬಾಲ ಪುರಸ್ಕಾರ(ಕಲೆ ಮತ್ತು ಸಂಸ್ಕೃತಿ ವಿಭಾಗ)ಕ್ಕೆ ರಾಜ್ಯದಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿನಿ ರೆಮೋನಾ ಪಿರೇರಾ. ಮಂಗಳೂರಿನ ಪಾದುವ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿ. ಅವರು ದೇಶದ 16 ರಾಜ್ಯಗಳಲ್ಲಿ ಭರತನಾಟ್ಯ ಪ್ರದರ್ಶನ ನೀಡಿ 20 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಮಂಗಳೂರಿನ ನೃತ್ಯಗುರು ಡಾ.ಶ್ರೀವಿದ್ಯಾ ಮುರಳೀಧರ್ ಅವರ ಶಿಷ್ಯೆ. ಅವರು ಪಡೆದಿರುವ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಯು 1 ಲಕ್ಷ ರೂ. ನಗದು ಬಹುಮಾನ ಒಳಗೊಂಡಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ