ಮಂಗಳೂರು: ಸೌದಿ ಅರೇಬಿಯಾದ ಅಸೀರ್ ಪ್ರಾಂತ್ಯದ ಜಿಝಾನ್ನಲ್ಲಿರುವ ಓಸೋಲ್ ಅಲ್ ಬನ್ನಾ ಎಂಬ ಕಂಪನಿಯಲ್ಲಿ ಎಲೆಕ್ಟ್ರಿಶಿಯನ್ ಆಗಿ ದುಡಿಯುತ್ತಿದ್ದ ತೊಕ್ಕೊಟ್ಟು ಸಮೀಪದ ರೊನಾಲ್ಡ್ ಡಿಸೋಜಾ ಅವರು ಮಾ.19 ರಂದು ನಿಧನರಾಗಿದ್ದಾರೆ. ಇದೀಗ ಅವರ ಮೃತದೇಹವನ್ನು ತಾಯ್ನಾಡಿಗೆ ರವಾನೆ ಮಾಡಲು ಇಂಡಿಯನ್ ಸೋಷಿಯಲ್ ಫೋರಂ ಸಿದ್ಧತೆ ನಡೆಸುತ್ತಿದೆ.
ಓಸೋಲ್ ಅಲ್ ಬನ್ನಾ ಕಂಪನಿಯವರು ಮೃತರ ಮನೆಯವರಿಗೆ ಈ ಬಗ್ಗೆ ಮಾಹಿತಿ ನೀಡುವ ಬಗ್ಗೆ ಪ್ರಯತ್ನಿಸಿದ್ದರೂ ಯಾವುದೇ ಮಾಹಿತಿ ದೊರಕಿಲ್ಲ. ಆದ್ದರಿಂದ ಕೊನೆಯ ಪ್ರಯತ್ನವಾಗಿ ಮೃತ ರೊನಾಲ್ಡ್ ಡಿಸೋಜಾ ಅವರನ್ನು ಸೌದಿ ಅರೇಬಿಯಾಗೆ ಕಳುಹಿಸಿರುವ ಮುಂಬಯಿಯ ಏಜೆಂಟರಿಗೆ ವಿಷಯ ತಿಳಿಸಿದ್ದಾರೆ. ಅವರು ತಮ್ಮ ಬಳಿ ಲಭ್ಯವಿರುವ ಮಂಗಳೂರಿನ ವಾಟ್ಸ್ಆ್ಯಪ್ ಗ್ರೂಪ್ಗಳಲ್ಲಿ ಮೃತರ ಬಗ್ಗೆ ಮಾಹಿತಿ ಹರಿ ಬಿಟ್ಟಿದ್ದರು.
ಇದರ ಮಧ್ಯೆ ಜಿಝಾನ್ನ ದರ್ಬ್ನಲ್ಲಿರುವ ಸಿದ್ದೀಕ್ ಉಳ್ಳಾಲರವರ ಮೂಲಕ ಇಂಡಿಯನ್ ಸೋಶಿಯಲ್ ಫೋರಂನ ಅಸೀರ್ ವಲಯ ಸಂಚಾಲಕ ಜಿ.ಕೆ.ಸಲೀಂ ಗುರುವಾಯನಕೆರೆಯವರನ್ನು ಮೃತರ ಮನೆಯವರು ಸಂಪರ್ಕಿಸಿ ಮೃತರ ಮಾಹಿತಿ ನೀಡಿದ್ದರು. ಮೃತರ ಪಾಸ್ ಪೋರ್ಟ್ ಹಾಗೂ ಇನ್ನಿತರ ದಾಖಲೆಗಳ ಮೂಲಕ ಹೊರಟ ಐಎಸ್ಎಫ್ ಜಿಝಾನ್ ಹಾಗೂ ಅಬೂಅರೀಸ್ ತಂಡವು ಜಿಝಾನ್ ಪ್ರಾಂತ್ಯದ ಹಲವು ಆಸ್ಪತ್ರೆಗಳಲ್ಲಿ ವಿಚಾರಿಸಿ ಕೊನೆಯದಾಗಿ ಅಬೂ ಅರೀಸ್ನ ಕಿಂಗ್ ಫಹಾದ್ ಅಸ್ಪತ್ರೆಯಲ್ಲಿ ಮೃತದೇಹ ಇರುವುದು ದೃಢಪಡಿಸಿದ್ದಾರೆ.
ಮೃತದೇಹವಿರುವ ಅಬೂಅರೀಸ್ನ ಕಿಂಗ್ ಫಹಾದ್ ಆಸ್ಪತ್ರೆಗೆ ಹಾಗೂ ಅಲ್ ಬನ್ನಾನ್ ಕಂಪನಿಯ ಮುಖ್ಯಸ್ಥರನ್ನು ಭೇಟಿ ಮಾಡಿದ ಜಿ.ಕೆ.ಸಲೀಂ ಗುರುವಾಯನಕೆರೆ ಹಾಗೂ ಸಿದ್ದೀಕ್ ಉಳ್ಳಾಲರವರು ಮೃತದೇಹವನ್ನು ತಾಯ್ನಾಡಿಗೆ ಶೀಘ್ರವಾಗಿ ಕಳುಹಿಸಲು ಬೇಕಾದ ಎಲ್ಲ ಪೂರಕ ದಾಖಲೆಗಳನ್ನು ಅಲ್ ಬನ್ನಾ ಕಂಪನಿಗೆ ಒದಗಿಸಲು ಹಾಗೂ ಸೌದಿ ಅರೇಬಿಯಾದ ಎಲ್ಲ ಕಾನೂನು ಪ್ರಕ್ರಿಯೆಗಳನ್ನು ಪೂರ್ತಿಗೊಳಿಸಲು ಇಂಡಿಯನ್ ಸೋಷಿಯಲ್ ಫಾರಂನ ಅಸೀರ್ ಕೇಂದ್ರೀಯ ಸಮಿತಿ ಉಪಾಧ್ಯಕ್ಷ ಹನೀಫ್ ಮಂಜೇಶ್ವರ ಅವರೊಂದಿಗೆ ಸಹಕರಿಸಿದ್ದಾರೆ.