ಮಂಗಳೂರು: ಸಾಮಾನ್ಯವಾಗಿ ಹಲಸಿನ ಮರಗಳು ವರ್ಷಕ್ಕೊಮ್ಮೆ ಹಲಸಿನ ಹಣ್ಣನ್ನು ಬಿಡುತ್ತವೆ. ಆದರೆ ಇಲ್ಲೊಬ್ಬರು ವರ್ಷಕ್ಕೆ ಎರಡು ಬಾರಿ ಫಲ ನೀಡುವ ಮಂಗಳ ಅರ್ಲಿ ಎಂಬ ಹಲಸಿನ ತಳಿಯನ್ನು ಅಭಿವೃದ್ಧಿ ಪಡಿಸಿದ್ದಾರೆ.
ಇಲ್ಲಿನ ಚಿಗುರು ನರ್ಸರಿಯ ಯು.ಬಿ ಸರ್ವೇಶ್ ರಾವ್ ಎಂಬವರು ವರ್ಷದಲ್ಲಿ ಎರಡು ಬಾರಿ ಫಲ ನೀಡುವ ಹಲಸಿನ ಹಣ್ಣಿನ ತಳಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಇದರ ಜೊತೆಗೆ ಇವರು ಹಲಸುಗಳ ವಿಭಿನ್ನ ತಳಿಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಮೂರು ವರ್ಷಗಳ ಸತತ ಪರಿಶ್ರಮದಿಂದ ಮಂಗಳ ಅರ್ಲಿ ಎಂಬ ಹಲಸಿನ ತಳಿಯನ್ನು ಇವರು ಅಭಿವೃದ್ದಿಪಡಿಸಿದ್ದು, ಈ ತಳಿಯ ಹಲಸಿನ ಗಿಡವು ಡಿಸೆಂಬರ್ ಮತ್ತು ಜೂನ್ ತಿಂಗಳಲ್ಲಿ ಹಣ್ಣು ಬಿಡುತ್ತದೆ. ಈ ತಳಿಯ ಹಲಸಿನ ಮರವು ಮೂರು ವರ್ಷದಲ್ಲಿ ಫಲ ನೀಡುವುದರ ಜೊತೆಗೆ ಈ ಗಿಡದ ಸರಿಯಾದ ಆರೈಕೆಯಿಂದ ವರ್ಷಕ್ಕೆ ಎರಡು ಬಾರಿ ಹಲಸಿನ ಹಣ್ಣನ್ನು ಪಡೆಯಬಹುದಾಗಿದೆ.