ಬೆಳ್ತಂಗಡಿ(ದಕ್ಷಿಣ ಕನ್ನಡ):ಕೋವಿಡ್-19 ಕೊರೊನಾ ಬಾಧೆಗೊಳಗಾಗಿ ಅಕಾಲಿಕವಾಗಿ ನಿಧನ ಹೊಂದುವ ಎಲ್ಲ ಜಾತಿ, ಧರ್ಮ, ಪಕ್ಷದ ಜನರ ಗೌರವಯುತವಾಗಿ ಸಂಪ್ರದಾಯ ಪ್ರಕಾರ ಅಂತ್ಯಸಂಸ್ಕಾರ ನಿರ್ವಹಿಸಲು ಸಮಿತಿಯ ನೇತೃತ್ವದಲ್ಲಿ ಮಾನವ ಸ್ಪಂದನ - ಕೊರೊನಾ ಸೋಲ್ಜರ್ಸ್ ಎನ್ನುವ 30 ಮಂದಿಯ ವಿಶೇಷ ತಂಡ ತಯಾರಾಗಿದೆ. ಆ.16 ರಂದು ತಂಡದ ಉದ್ಘಾಟನೆ ನಡೆಯಲಿದೆ ಎಂದು ಕೋವಿಡ್ ಎಕ್ಸ್ ಪ್ರೆಸ್ ಟೀಮ್ ಸದಸ್ಯರಾದ ಅಶ್ರಫ್ ಆಲಿಕುಂಜ್ಙಿ ತಿಳಿಸಿದರು.
ಬೆಳ್ತಂಗಡಿಯಲ್ಲಿ 'ಮಾನವ ಸ್ಪಂದನ- ಕೊರೊನಾ ಸೋಲ್ಜರ್ಸ್' ವಿಶೇಷ ತಂಡ ಸೇವೆಗೆ ಸಜ್ಜು ಬುಧವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ತಂಡದ ನಿರ್ವಹಣೆ ಮತ್ತು ಸೇವೆಗಾಗಿ ವಿವಿಧ ಸಂಘಸಂಸ್ಥೆಗಳಲ್ಲಿ ದುಡಿದು ಅನುಭವ ಹೊಂದಿರುವ ತಾಲೂಕಿನ 9 ಮಂದಿಯನ್ನು ಸೇರಿಸಿಕೊಂಡು ಕೋವಿಡ್ ಎಕ್ಸ್ ಪ್ರೆಸ್ ಟೀಮ್ ಎಂಬ ಕಾರ್ಯಕಾರಿ ಸಮಿತಿ ರಚಿಸಲಾಗಿದೆ. ಕರ್ನಾಟಕ ಮಾನವ ಹಕ್ಕುಗಳ ಸಮಿತಿ ಬೆಂಗಳೂರು, ಇದು ಇದು ಶ್ರೀನಿವಾಸ ಗೌಡ ಅವರು ಸಂಸ್ಥಾಪಿಸಿದ ಸಮಿತಿಯಾಗಿದ್ದು, ನಿವೃತ್ತ ನ್ಯಾಯಮೂರ್ತಿಗಳನ್ನೂ ಒಳಗೊಂಡ ಸ್ವಾಯತ್ತ ಸಂಸ್ಥೆಯಾಗಿದೆ. ಇದು ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಮಿತಿಗಳನ್ನು ಹೊಂದಿದೆ. ಇದರ ಬೆಳ್ತಂಗಡಿ ತಾಲೂಕು ಘಟಕವು ಕಳೆದ 4 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಹಲವು ಸಾಮಾಜಿಕ, ಜನಪರ ಕಾರ್ಯಕ್ರಮ ನಡೆಸಿಕೊಂಡು ಬಂದಿರುತ್ತದೆ. ಮಾನವ ಹಕ್ಕುಗಳ ಉಲ್ಲಂಘನೆಯಂತಹ ಪ್ರಕರಣಗಳು ನಡೆದಾಗ ಅಂತವರಿಗೆ ಬೇಕಾದ ಮಾಹಿತಿ, ರಕ್ಷಣೆ, ಕಾನೂನಿನ ನೆರವು ನೀಡುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು.
ಕರ್ನಾಟಕ ಮಾನವ ಹಕ್ಕುಗಳ ಸಮಿತಿ ಬೆಳ್ತಂಗಡಿ ಘಟಕ ಈಗಾಗಲೇ ತಾಲೂಕಿನಲ್ಲಿ ಮಾನವ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಿದ್ದು, ಅಕಾಲಿಕ ನೆರೆ, ಕೊರೊನಾ ಮಹಾಮಾರಿಯಂತಹ ಸಂದರ್ಭದಲ್ಲಿ ಸಮಿತಿಯ ವತಿಯಿಂದ ಆಹಾರ ಮತ್ತು ಅಗತ್ಯ ವಸ್ತುಗಳ ಕಿಟ್ ವಿತರಣೆ ಮಾಡಿದೆ. ಅಗತ್ಯ ಬಿದ್ದಾಗ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದೆ.
ಸ್ವಯಂ ಸೇವಕರ ನೋಂದಣಿ, ಆರೋಗ್ಯ ಭದ್ರತೆಗೆ ವಿಮೆ ವ್ಯವಸ್ಥೆ ಈಗಾಗಲೇ ಮಾಡಲಾಗಿದೆ. ವಿವಿಧ ಸಮುದಾಯ ನಾಯಕರ ಜೊತೆ ಚರ್ಚಿಸಿ ರಚಿಸಲಾಗಿದ್ದು, ಸರ್ವ ಧರ್ಮೀಯರನ್ನೊಳಗೊಂಡ ತಂಡದ ಸ್ವಯಂ ಸೇವಕರಿಗೆ 20 ರಿಂದ 45 ವರ್ಷ ವಯೋಮಿತಿ ನಿಗದಿಪಡಿಸಿ ಆಯ್ಕೆ ಮಾಡಲಾಗಿದೆ. ಅವರಿಂದ ಸ್ವ ಒಪ್ಪಿಗೆ ಪತ್ರದಲ್ಲಿ ಸಹಿ ಪಡೆದು, ಪ್ರತಿಯೊಬ್ಬರಿಗೂ ವೈಯುಕ್ತಿಕವಾಗಿ ತಲಾ 1.50 ಲಕ್ಷ ರೂ. ಮೊತ್ತದ ವಿಮೆಯನ್ನು ಸಂಘಟನೆಯ ಕಡೆಯಿಂದ ಮಾಡಲಾಗಿರುತ್ತದೆ. ಅವರ ಆರೋಗ್ಯ ಪರೀಕ್ಷೆ, ಕೋವಿಡ್ ಪರೀಕ್ಷೆ ನಡೆಸಿ ಆರೋಗ್ಯ ದೃಢಪಡಿಸಿಕೊಳ್ಳಲಾಗಿರುತ್ತದೆ.
ಪ್ರತ್ಯೇಕ ಆಂಬುಲೆನ್ಸ್ ವ್ಯವಸ್ಥೆ:ಬೆಳ್ತಂಗಡಿ ತಾಲೂಕಿನ 81 ಗ್ರಾಮಗಳಲ್ಲಿ ಕೊರೊನಾದಿಂದ ಯಾರೇ ಮೃತಪಟ್ಟರೂ ಇಲಾಖೆ ಅಥವಾ ಸಂಬಂಧಪಟ್ಟವರ ಕುಟುಂಬವರ್ಗದವರು ನಮ್ಮನ್ನು ಸಂಪರ್ಕಿಸಿದಲ್ಲಿ ನಮ್ಮ ಕಾರ್ಯಕರ್ತರು ನಾವೇ ನಿಯೋಜಿಸಿದ ವಿಶೇಷ ಆಂಬುಲೆನ್ಸ್ ನಲ್ಲಿ ಸ್ಥಳಕ್ಕೆ ತೆರಳಿ ಮೃತದೇಹವನ್ನು ಪಡೆದು ಅವರ ಮನೆಗೆ ಮತ್ತು ಮೃತರ ಕುಟುಂಬಸ್ಥರು ಸೂಚಿಸುವ ಸಂಸ್ಕಾರ ಸ್ಥಳಕ್ಕೆ ಕೊಂಡೋಯ್ದು, ಎಲ್ಲ ರೀತಿಯ ಅಂತಿಮ ಕ್ರಿಯೆಗಳನ್ನು ಸಂಪೂರ್ಣ ಉಚಿತವಾಗಿ ನಡೆಸಿಕೊಡಲಿದ್ದೇವೆ. ಸೆಬಾಸ್ಟಿಯನ್ ಪಿ. ಸಿ (9482046975), ಅಶ್ರಫ್ ಆಲಿಕುಂಜ್ಙಿ (9449640130), ಫಾ. ಬಿನೋಯ್ (9740558155), ಅಕ್ಬರ್ ಬೆಳ್ತಂಗಡಿ(9880842882) ದೀಪಕ್ ಜಿ(9901947498), ಶಶಿರಾಜ್ ಶೆಟ್ಟಿ (8618636220), ಪ್ರಸಾದ್ ಶೆಟ್ಟಿ (9740537185), ಬಿ. ಕೆ. ವಸಂತ (9448156120), ಉಮೇಶ್ ಗೌಡ ಕೌಡಂ (9880807509) ಅವರನ್ನು ಸಂಪರ್ಕಿಸಬಹುದು ಎಂದರು.
ತಂಡಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಬೆಳ್ತಂಗಡಿ ಧರ್ಮಪ್ರಾಂತ್ಯದ ಬಿಷಪ್ ಲಾರೆನ್ಸ್ ಮುಕ್ಕುಯಿಯವರು, ಕಾಜೂರು ದರ್ಗಾದ ಧರ್ಮಗುರುಗಳು ಮಾರ್ಗದರ್ಶನ ನೀಡುತ್ತಿದ್ದಾರೆ ಎಂದರು. ಗೋಷ್ಠಿಯಲ್ಲಿ ಸದಸ್ಯರಾದ ಸೆಬಾಸ್ಟಿಯನ್ ಪಿ. ಸಿ, ಶಶಿರಾಜ್ ಶೆಟ್ಟಿ, ಬಿ. ಕೆ ವಸಂತ, ಉಮೇಶ್ ಗೌಡ ಕೌಡಂಗೆ, ಉಪಸ್ಥಿತರಿದ್ದರು.