ಮಂಗಳೂರು: ರಸ್ತೆ ಬದಿಯಲ್ಲಿರುವ ತಡೆಗೋಡೆ ಕಾಮಗಾರಿ ನಡೆಸುತ್ತಿದ್ದ ಸಂದರ್ಭದಲ್ಲಿ ಗುಡ್ಡ ಕುಸಿದು ಯುವಕನೋರ್ವನು ಮಣ್ಣಿನಡಿ ಸಿಲುಕಿದ್ದು, ಹರಸಾಹಸಪಟ್ಟು ಆತನನ್ನು ರಕ್ಷಣೆ ಮಾಡಿರುವ ಘಟನೆ ನಗರದ ಕುಪ್ಪೆಪದವು ಬಳಿಯ ನೊನಾಲು ಎಂಬಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ಅರಳ ಗ್ರಾಮದ ರಾಜೇಶ್ ಪೂಜಾರಿ (28) ಮಣ್ಣಿನಡಿ ಸಿಲುಕಿದ ಯುವಕ.
ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿದ ಯುವಕ: ಹರಸಾಹಸಪಟ್ಟು ರಕ್ಷಣೆ
ಮಂಗಳೂರಿನ ನೊನಾಲು ಎಂಬಲ್ಲಿ ರಸ್ತೆಬದಿ ಗುಡ್ಡ ಕುಸಿಯದಂತೆ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ವೇಳೆ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಗುಡ್ಡ ಕುಸಿದ ಘಟನೆ ನಡೆದಿದೆ. ಸ್ಥಳೀಯರು ಎರಡು ಗಂಟೆಗಳ ಸತತ ಕಾರ್ಯಾಚರಣೆ ನಡೆಸಿ ಯುವಕನ್ನು ರಕ್ಷಿಸಿದ್ದಾರೆ.
save
ನೊನಾಲು ಎಂಬಲ್ಲಿ ರಸ್ತೆಬದಿ ಗುಡ್ಡ ಕುಸಿಯದಂತೆ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಈ ಸಂದರ್ಭ ರಾಜೇಶ್ ಪೂಜಾರಿ ಹಾಗೂ ಮತ್ತೊಬ್ಬರು ಕೆಲಸ ಮಾಡುತ್ತಿದ್ದರು. ಆಗ ಏಕಾಏಕಿ ಮಣ್ಣು ಕುಸಿದು ಇವರ ಮೇಲೆಯೇ ಬಿದ್ದಿದೆ. ಈ ಸಂದರ್ಭ ರಾಜೇಶ್ ಅವರ ತಲೆ ಮಾತ್ರ ಕಾಣಿಸುವಂತೆ ದೇಹಕ್ಕೆಲ್ಲಾ ಮಣ್ಣು ಬಿದ್ದಿದೆ.
ತಕ್ಷಣ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಎರಡು ಗಂಟೆಗಳ ಸತತ ಕಾರ್ಯಾಚರಣೆ ನಡೆಸಿ ರಾಜೇಶ್ ಅವರನ್ನು ಮೇಲೆತ್ತಿದ್ದಾರೆ. ಬಳಿಕ ಕುಪ್ಪೆಪದವು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.