ಮಂಗಳೂರು (ದಕ್ಷಿಣ ಕನ್ನಡ) :ಊಟದ ತಟ್ಟೆ ತೊಳೆಯುವ ವಿಚಾರವಾಗಿ ನಡೆದ ಮಾತಿನ ಚಕಮಕಿ ಯುವಕನೊಬ್ಬನ ಹತ್ಯೆಯ ಮೂಲಕ ಅಂತ್ಯ ಕಂಡ ಘಟನೆ ಇಲ್ಲಿನ ಮರವೂರು ಗ್ರಾಮದ ಕೋಸ್ಟಲ್ ಸೈಟ್ನಲ್ಲಿ ನಡೆದಿದೆ. ಆರೋಪಿಯನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಮಹರಾಜ್ ಘಂಜ್‌ನ ಹರ್ ಪುರದ ಸಂಜಯ್ (28) ಕೊಲೆಯಾಗಿದ್ದಾನೆ. ಮಹರಾಜ್ ಘಂಜ್‌ನ ಬದಲಸಲುಯ ಖುರ್ದ್‌ನ ಸೋಹನ್ ಯಾದವ್(19) ಆರೋಪಿ ಎಂದು ತಿಳಿದುಬಂದಿದೆ.
ವಿವರ: ಬಜಪೆ ಠಾಣಾ ವ್ಯಾಪ್ತಿಯ ಮರವೂರು ಗ್ರಾಮದ ಕೋಸ್ಟಲ್ ಗಾರ್ಡ್ ಸೈಟ್ನಲ್ಲಿ ಕೂಲಿ ಕಾರ್ಮಿಕರಾಗಿ ಸಂಜಯ್ ಮತ್ತು ಸೊಹಾನ್ ಯಾದವ್ ಕೆಲಸ ಮಾಡುತ್ತಿದ್ದರು. ಎಂದಿನಂತೆ ಮಾರ್ಚ್ 5ರಂದು ಊಟ ಮುಗಿಸಿ ತಟ್ಟೆ ತೊಳೆಯಲು ಹೋಗಿದ್ದಾಗ ಇಬ್ಬರ ನಡುವೆ ಗಲಾಟೆ ಆರಂಭವಾಗಿದೆ. ಈ ಗಲಾಟೆ ಮೊದಲು ಪರಸ್ಪರ ಮಾತಿಗೆ ಮಾತು ಬೆಳೆದು ಶುರುವಾಗಿದ್ದು, ಕೋಪಗೊಂಡ ಸೊಹನ್ ಯಾದವ ಸಂಜಯ್‌ನನ್ನು ಬಲವಾಗಿ ನೆಲಕ್ಕೆ ತಳ್ಳಿದ್ದಾನೆ. ಪರಿಣಾಮ ಸಂಜಯ ಹಿಮ್ಮುಖವಾಗಿ ಬಿದ್ದು ಆತನ ತಲೆಗೆ ಗಂಭೀರವಾದ ಗಾಯವಾಗಿತ್ತು. ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ. ಈ ಘಟನೆ ನಡೆದ ಬಳಿಕ ಆರೋಪಿ ಸೋಹನ್ ಯಾದವ್ ಸ್ಥಳದಿಂದ ಪರಾರಿಯಾಗಿದ್ದ. ಈತ ಮಾರ್ಚ್ 7 ರಂದು ಮಧ್ಯಾಹ್ನ 1 ಗಂಟೆಯ ವೇಳೆಗೆ ಊರಿಗೆ ಹೋಗಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಬಜಪೆ ಪೊಲೀಸರು ಮಂಗಳೂರು ರೈಲ್ವೇ ನಿಲ್ದಾಣದ ಬಳಿ ವಶಕ್ಕೆ ಪಡೆದು ನಂತರ ಬಂಧಿಸಿದ್ದಾರೆ.
ಆರೋಪಿಯ ಬಂಧನ ಕಾರ್ಯಾಚರಣೆಯಲ್ಲಿ ಬಜಪೆ ಠಾಣಾ ಪಿ.ಐ.ಪ್ರಕಾಶ್, ಪಿ.ಸ್.ಐ. ಗುರು ಕಾಂತಿ, ಪೂವಪ್ಪ, ಎ.ಎಸ್.ಐ. ರಾಮ ಪೂಜಾರಿ, ಮತ್ತು ಹೆಡ್ ಕಾನ್ಸ್‌ಟೇಬಲ್‌ಗಳಾದ ಪುರುಷೋತ್ತಮ, ಸಂತೋಷ್ ಡಿ.ಕೆ. ಮಹೇಶ್, ಸುಜನ್, ರಾಜೇಶ್, ರಶೀದ್ ಹಾಗೂ ಸಂಜೀವ ಭಜಂತ್ರಿ, ಪ್ರೇಮ್ ಕುಮಾರ್ ಪಾಲ್ಗೊಂಡಿದ್ದರು.