ನೆಲ್ಯಾಡಿ(ದ.ಕನ್ನಡ): ಕಾಡಾನೆ ದಾಳಿಯಿಂದ ತಂದೆ ಮೃತಪಟ್ಟು ಮಗ ತೀವ್ರವಾಗಿ ಗಾಯಗೊಂಡಿರುವ ಘಟನೆ ಉಪ್ಪಿನಂಗಡಿ ಅರಣ್ಯ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 75ರ ಬಳಿ ಇರುವ ಶಿರಾಡಿಯ ಕೊಟ್ಟಿಕ್ಕಲ್ ಎಂಬಲ್ಲಿ ನಡೆದಿದೆ. ತಿಮ್ಮಪ್ಪ (45) ಮೃತರು. ಇವರ ಮಗ ಶರಣ್ (18) ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಿಮ್ಮಪ್ಪ ಅವರು ಶಿರಾಡಿ ಜನತಾ ಕಾಲೋನಿಯ ನಿವಾಸಿ ಎಂದು ತಿಳಿದುಬಂದಿದೆ. ಕಾರ್ಯದ ನಿಮಿತ್ತ ಕೊಟ್ಟಿಕ್ಕಲ್ ಸಮೀಪ ಮಗನ ಜೊತೆ ಹೋಗುತ್ತಿದ್ದಾಗ ಕಾಡಾನೆ ದಾಳಿ ಮಾಡಿದೆ. ಶಿರಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ 75ರ ರಸ್ತೆ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಫೋಟಕ ಬಳಸಿ ಬಂಡೆ ಹೊಡೆಯುವ ಶಬ್ದಕ್ಕೆ ಬೆದರಿದ ಒಂಟಿ ಸಲಗ ಇವರ ಮೇಲೆ ದಾಳಿ ಮಾಡಿರಬಹುದು ಎಂದು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇತ್ತೀಚೆಗಿನ ಕಾಡಾನೆ ದಾಳಿ ಪ್ರಕರಣಗಳಿವು..: ಕಳೆದ 2 ದಿನಗಳ ಹಿಂದಷ್ಟೇ ಕಾಡಿನಿಂದ ಆಹಾರ ಅರಸಿ ಬಂದಿದ್ದ ಕಾಡಾನೆಯೊಂದು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಚಿಕ್ಕ ಬೀಚನಹಳ್ಳಿ ಗ್ರಾಮದಲ್ಲಿ ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿತ್ತು. ಕಣದಲ್ಲಿ ಹುರುಳಿ ಒಕ್ಕಲು ಮಾಡುತ್ತಿದ್ದ ಚಿಕ್ಕಮ್ಮ ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದರು.
ರೈತನ ಬಲಿ ಪಡೆದಿತ್ತು ಒಂಟಿ ಸಲಗ: ಕಳೆದ ತಿಂಗಳು (ಡಿಸೆಂಬರ್) ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಹಾದಿಕೆರೆ ಗ್ರಾಮ ಸಮೀಪದ ರಾಗಿ ಬಸವನಹಳ್ಳಿಯಲ್ಲಿ ಒಂಟಿ ಸಲಗವೊಂದು ರೈತನನ್ನು ಬಲಿ ಪಡೆದಿತ್ತು. ಈರಪ್ಪ (60) ಎಂಬುವರು ಹೊಲದಲ್ಲಿ ರಾಗಿ ಬೆಳೆದ ಹಿನ್ನೆಲೆಯಲ್ಲಿ ಕಾಡು ಪ್ರಾಣಿಗಳಿಂದ ಬೆಳೆ ರಕ್ಷಿಸಲೆಂದು ಕಾವಲು ಕಾಯಲು ಹೋಗಿದ್ದರು. ರಾತ್ರಿಯಿಡೀ ಜಮೀನಿನಲ್ಲಿದ್ದು, ಗುಡಿಸಲಿನಲ್ಲೇ ಮಲಗಿದ್ದರು. ಈ ವೇಳೆ ಗುಡಿಸಲಿನ ಮೇಲೆ ದಿಢೀರ್ ದಾಳಿ ನಡೆಸಿದ ಕಾಡಾನೆ, ಗುಡಿಸಲು ಧ್ವಂಸ ಮಾಡಿ, ರೈತನನ್ನು ಅಡಿಕೆ ಗಿಡಗಳ ಮಧ್ಯೆ ಎಳೆದು ತಂದಿದ್ದು, ಅವರು ಸಾವಿಗೀಡಾಗಿದ್ದರು.