ಮಂಗಳೂರು: ಬೈಕಂಪಾಡಿ ಕೈಗಾರಿಕಾ ಪ್ರದೇಶದ ಕಂಪನಿಯೊಂದರಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದಾಗ ಬೆಂಕಿ ಕಾಣಿಸಿಕೊಂಡು ಟ್ಯಾಂಕ್ ಮೇಲ್ಭಾಗದಿಂದ ಕೆಳಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. ರೊನಾಲ್ಡ್ ಪೌಲ್ (64) ಮೃತಪಟ್ಟವರು.
ಜ.13ರಂದು ಜೋನ್ಸ್ ಪೆಟ್ರೋಕೆಮಿಕಲ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ರೊನಾಲ್ಡ್ ಪೌಲ್ ಇತರ 6 ಮಂದಿ ಕಾರ್ಮಿಕರೊಂದಿಗೆ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು. ಸಂಜೆ 4 ಗಂಟೆಯ ಸುಮಾರಿಗೆ ರೊನಾಲ್ಡ್ ಪೌಲ್ ಟ್ಯಾಂಕ್ ಮೇಲೆ ನಿಂತು ವೆಲ್ಡಿಂಗ್ ಮಾಡುತ್ತಿದ್ದಾಗ ಇತರೆ ಕಾರ್ಮಿಕರು ಮಹಡಿ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಪೌಲ್ಗೆ ಸುಟ್ಟ ಗಾಯಗಳಾಗಿವೆ. ಇದರಿಂದಾಗಿ ಸುಮಾರು 20 ಅಡಿಯ ಟ್ಯಾಂಕ್ ಮೇಲ್ಭಾಗದಿಂದ ಕೆಳಗೆ ಬಿದ್ದಿದ್ದು, ಹೊಟ್ಟೆ ಮತ್ತು ತಲೆಗೆ ತೀವ್ರ ಗಾಯಗಳಾಗಿತ್ತು. ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಅವರು ಸಾವನ್ನಪ್ಪಿದ್ದಾರೆ.