ಗುಂಡ್ಯ(ದಕ್ಷಿಣ ಕನ್ನಡ):ಕಾರಿನ ಮೇಲೆ ಮರವೊಂದು ಬಿದ್ದು ವ್ಯಕ್ತಿ ಮೃತಪಟ್ಟ ಘಟನೆ ಶಿರಾಡಿ ಗ್ರಾಮದ ಗುಂಡ್ಯ ಸಮೀಪದ ಅಡ್ಡಹೊಳೆ ಎಂಬಲ್ಲಿ ಸಂಭವಿಸಿದೆ. ಕಾರಿನಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ ಕೆಳಗಿಳಿದು ಪರಿಶೀಲಿಸುತ್ತಿದ್ದಾಗಲೇ ದುರಂತ ನಡೆದಿದೆ.
ಘಟನೆಯಲ್ಲಿ ಕಾರು ಚಾಲಕ ಸುರೇಶ್ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದು, ಮಹಿಳೆ ಹಾಗೂ ಇಬ್ಬರು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ 75ರ ಮೂಲಕ ಬೆಂಗಳೂರು ಕಡೆಗೆ ತೆರಳುತ್ತಿದ್ದಾಗ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ಸುರೇಶ್ ಕಾರನ್ನು ನಿಲ್ಲಿಸಿ ಬಾನೆಟ್ ತೆಗೆದು ಪರಿಶೀಲನೆ ನಡೆಸುತ್ತಿದ್ದರು. ಅದೇ ವೇಳೆ ಹೆದ್ದಾರಿ ಬದಿಯಲ್ಲಿದ್ದ ಹಾಲುಮಡ್ಡಿ ಮರವು ಅವರ ಮೇಲೆ ಬಿದ್ದಿದೆ. ಘಟನೆಯಲ್ಲಿ ಕಾರು ಜಖಂಗೊಂಡಿದ್ದು, ಉಪ್ಪಿನಂಗಡಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.