ಉಳ್ಳಾಲ(ದಕ್ಷಿಣ ಕನ್ನಡ): ಪುತ್ರ ಆತ್ಮಹತ್ಯೆ ಮಾಡಿಕೊಂಡ 32 ದಿನಗಳ ಅಂತರದಲ್ಲಿ ತಂದೆಯೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇರಳ ಕುಂಬಳೆ ಬಳಿಯ ಬಂಬ್ರಾಣ ಕಲ್ಕುಲ ನಿವಾಸಿ ಕಲ್ಲಿನ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಲೋಕೇಶ್ (52) ಮೃತರು. ಸೋಮವಾರ ಬೆಳಗ್ಗೆ ಉಳ್ಳಾಲ ಕಡಲ ಕಿನಾರೆಯಲ್ಲಿ ಇವರ ಶವ ಪತ್ತೆಯಾಗಿದೆ.
ಇವರ ಪುತ್ರ ರಾಜೇಶ್ (26) ಕಳೆದ ಜು. 10 ರಂದು ನಾಪತ್ತೆಯಾಗಿದ್ದ. ಬಳಿಕ ಆತ ನ ಮೃತದೇಹ ಜು. 12ರಂದು ಬೆಳಗ್ಗೆ ಮಂಗಳೂರು ಬೆಂಗರೆ ನೇತ್ರಾವತಿ ನದಿ ತೀರದಲ್ಲಿ ಪತ್ತೆಯಾಗಿತ್ತು. ಮಗನ ಅಂತ್ಯಕ್ರಿಯೆ ಬಳಿಕ ತಂದೆ ಲೋಕೇಶ್ ನೊಂದುಕೊಂಡಿದ್ದರು. ಮಗನ ಸಾವಿನ ಬಳಿಕ ಮಾನಸಿಕವಾಗಿ ಕುಗ್ಗಿ ಹೋಗಿದ್ದರು.
ಆ.13 ರಂದು ಬೆಳಗ್ಗೆ 9.00 ಗಂಟೆಯ ವೇಳೆ ಪರಿಸರದ ಕೆಲವು ಮಂದಿಗೆ ಲೋಕೇಶ್ ಅವರು ವಾಟ್ಸ್ಆ್ಯಪ್ನಲ್ಲಿ "ನಾನು ಈಗ ಸೋಮೇಶ್ವರಕ್ಕೆ ಹೋಗುತ್ತೇನೆ. ನಾನು ಮೊಬೈಲ್ ತೆಗೆದುಕೊಂಡು ಹೋಗುವುದಿಲ್ಲ. ಮನೆಯಲ್ಲಿ ಇಟ್ಟು ಹೋಗುತ್ತೇನೆ ಎಂದು ಸಂದೇಶ ಕಳುಹಿಸಿ ಮನೆಯಿಂದ ತೆರಳಿದ್ದರು. ವಾಟ್ಸ್ಆ್ಯಪ್ ಸಂದೇಶ ನೋಡಿದ ಕೂಡಲೇ ಪರಿಸರದವರು ಕರೆ ಮಾಡಿದಾಗ ಮನೆ ಮಂದಿ ಕಾಲ್ ರಿಸೀವ್ ಮಾಡಿದ್ದರು. ಆಗ ಮನೆ ಮಂದಿ ಲೋಕೇಶ್ ಅವರು ಮೊಬೈಲ್ ಮನೆಯಲ್ಲಿ ಇಟ್ಟು ಹೊರ ಹೋದ ಬಗ್ಗೆ ಮಾಹಿತಿ ನೀಡಿದ್ದರು. ಕೂಡಲೇ ಈ ಮನೆಯವರು ಹಾಗೂ ಪರಿಸರ ನಿವಾಸಿಗಳು ಈ ವಿಷಯವನ್ನು ಉಳ್ಳಾಲ ಠಾಣೆಗೆ ತಿಳಿಸಿದ್ದರು.
ನಿನ್ನೆ 11.00 ಗಂಟೆ ವೇಳೆ ಲೋಕೇಶ್ ಅವರ ಮೃತದೇಹ ಉಳ್ಳಾಲದಲ್ಲಿ ಮೀನುಗಾರರಿಗೆ ಸಿಕ್ಕಿದೆ. ಬಳಿಕ ಮೃತದೇಹವನ್ನು ಉಳ್ಳಾಲ ಪೊಲೀಸರು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಮರಣೋತ್ತರ ಪರೀಕ್ಷೆ ನಡೆಸಿದ್ದು, ಇಂದು ಬೆಳಗ್ಗೆ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಪುತ್ರ ರಾಜೇಶ್ ಸಾವಿನ ಬಳಿಕ ಕೇವಲ 33 ದಿನದಲ್ಲಿ ತಂದೆ ಲೋಕೇಶ್ ಕೂಡ ಸಾವನಪ್ಪಿದ್ದು, ಕುಟುಂಬ ಹಾಗೂ ಪರಿಸರ ಪ್ರದೇಶದಲ್ಲಿ ಶೋಕ ಮಡುಗಟ್ಟಿದೆ. ಈ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಾರ್ಟ್ಮೆಂಟ್ನ 17ನೇ ಮಹಡಿಯಿಂದ ಜಿಗಿದು ಉದ್ಯಮಿ ಆತ್ಮಹತ್ಯೆ:ಉದ್ಯಮಿಯೊಬ್ಬರು ಕಟ್ಟಡದ 17ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಬೆಂದೂರುವೆಲ್ನ ಅಟ್ಲಾಂಟಿಕ್ ಅಪಾರ್ಟೆಂಟ್ನಲ್ಲಿ ಇತ್ತೀಚೆಗೆ(ಆ.6)ನಡೆದಿತ್ತು. ನಗರದಲ್ಲಿ ಕ್ವಾರೆ ಹಾಗೂ ಬಿಲ್ಡರ್ ಉದ್ಯಮದ ವ್ಯವಹಾರ ನಡೆಸುತ್ತಿದ್ದ ಮೋಹನ್ ಅಮೀನ್ (62) ಸಾವಿಗೀಡಾದವರು.
ಆ.6ರಂದು ಬೆಳಗ್ಗೆ 9 ಗಂಟೆಯ ಸುಮಾರಿಗೆ ಘಟನೆ ನಡೆದಿತ್ತು. ಕೆಳಗೆ ಬಿದ್ದ ರಭಸಕ್ಕೆ ತಲೆ ಸಂಪೂರ್ಣ ಛಿದ್ರಗೊಂಡಿತ್ತು. ವಿಜಯವಾಹಿನಿ ಎಂಬ ಹೆಸರಿನ ಟಿಪ್ಪರ್, ಕ್ವಾರೆ, ಜಲ್ಲಿಕಲ್ಲು ಬಿಜಿನೆಸ್ ಹೊಂದಿದ್ದ ಇವರು ಮಲ್ಲಿಕಟ್ಟೆಯಲ್ಲಿ ಕಚೇರಿ ಹೊಂದಿದ್ದರು. "ಡೆತ್ ನೋಟ್ ದೊರೆತಿದ್ದು, ನನ್ನ ಸಾವಿಗೆ ನಾನೇ ಕಾರಣ. ಪತ್ನಿ, ಮಕ್ಕಳನ್ನು ಕ್ಷಮಿಸಿ'' ಎಂದಷ್ಟೇ ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು.
ಇದನ್ನೂ ಓದಿ:Suicide: ಮಂಗಳೂರು: ಅಪಾರ್ಟ್ಮೆಂಟ್ನ 17ನೇ ಮಹಡಿಯಿಂದ ಜಿಗಿದು ಉದ್ಯಮಿ ಆತ್ಮಹತ್ಯೆ