ಬೆಳ್ತಂಗಡಿ:ಪತ್ನಿ ಆತ್ಮಹತ್ಯೆ ಮಾಡಿಕೊಂಡ ಮರುದಿನವೇ ಪತಿಯೂ ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಮಚ್ಚಿನ ಸಮೀಪ ನಡೆದಿದೆ.
ಬೆಳ್ತಂಗಡಿ ತಾಲೂಕು ಮಚ್ಚಿನ ಗ್ರಾಮದ ಮುಡಿಪಿರೆ ಎಂಬಲ್ಲಿ ಚಂದ್ರಾವತಿ (49) ಎಂಬುವವರು ಮನೆಯ ಪಕ್ಕದ ಗೇರುಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರ ಅಂತ್ಯಸಂಸ್ಕಾರಕ್ಕಾಗಿ ಶಾಮಿಯಾನ ಅಳವಡಿಸಲಾಗಿತ್ತು. ಇದೇ ಶಾಮಿಯಾನದ ಕಂಬಕ್ಕೆ ಪತಿ ಶಿವಪ್ಪ ಗೌಡ (56) ಮರುದಿನ ಬೆಳಗ್ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೆ ಶರಣಾದ ಶಿವಪ್ಪ ಗೌಡ ಪತಿಗೆ ವಾಸಿಯಾಗದ ದೀರ್ಘಕಾಲದ ಅಸೌಖ್ಯ, ಕುಡಿತದ ಚಟ ಹಾಗು ಮಕ್ಕಳಾಗದೇ ಇರುವ ಬಗ್ಗೆ ಮಾನಸಿಕವಾಗಿ ನೊಂದಿದ್ದ ಚಂದ್ರಾವತಿ ಜೀವನದಲ್ಲಿ ಜುಗುಪ್ಸೆ ಹೊಂದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಹಾಗಾಗಿ, ಪತ್ನಿಯ ಕೊರಗಲ್ಲಿ ಪತಿ ಕೂಡ ಆತ್ಮಹತ್ಯೆಗೆ ಶರಣಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಈ ದಂಪತಿ ಮುಡಿಪಿರೆ ಎಂಬಲ್ಲಿ ತಾಯಿ ನಾಗಮ್ಮರೊಂದಿಗೆ ವಾಸ್ತವ್ಯವಿದ್ದರು. ಇದೀಗ ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದು, ತಾಯಿ ಒಬ್ಬಂಟಿಯಾಗಿದ್ದಾರೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.