ಬೆಳ್ತಂಗಡಿ:ವಿವಾಹಿತರೊಬ್ಬರು ಧರ್ಮಸ್ಥಳದ ಕಾಡಿನಲ್ಲಿ ವಿಷ ಸೇವಿಸುತ್ತಾ ವಿಡಿಯೋ ಮಾಡಿ ಅದನ್ನು ಕುಟುಂಬದವರಿಗೆ ಕಳುಹಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಮಹಾತ್ಮಾ ಗಾಂಧಿ ವೃತ್ತದ ಪಕ್ಕದ ಗುಡ್ಡದಲ್ಲಿ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರಾಮನಾಥ್ ಪುರದ ನಿವಾಸಿ ಸುನೀಲ್ (28) ಎಂಬುವವರು ತನ್ನ ಹೀರೋ ಹೊಂಡಾ ಬೈಕ್ನಲ್ಲಿ ಸೆಪ್ಟೆಂಬರ್ 28 ರಂದು ಬುಧವಾರ ಬೆಳಗ್ಗೆ ಧರ್ಮಸ್ಥಳಕ್ಕೆ ಬಂದಿದ್ದಾರೆ.
ದೇವರ ದರ್ಶನ ಮುಗಿಸಿ ಮಧ್ಯಾಹ್ನದ ನಂತರ ಮಹಾತ್ಮ ಗಾಂಧಿ ವೃತ್ತದ ಪಕ್ಕದ ಗುಡ್ಡಕ್ಕೆ ಹೋಗಿ ಕುಳಿತು ತನ್ನ ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿ ವಿಷ ಪದಾರ್ಥ ಕುಡಿದಿದ್ದಾರೆ.
ನಂತರ ಅದರ ವಿಡಿಯೋ ಸಮೇತ ಧರ್ಮಸ್ಥಳ ದೇವರ ದರ್ಶನ ಪಡೆದ ಫೋಟೋ, ಮಹಾತ್ಮ ಗಾಂಧಿ ವೃತ್ತದ ಪೋಟೋಗಳನ್ನು ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ಕಳುಹಿಸಿದ್ದಾರೆ. ಇದನ್ನು ಗಮನಿಸಿದ ಕುಟುಂಬದವರು ಮತ್ತು ಸ್ನೇಹಿತರು ಧರ್ಮಸ್ಥಳ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಕೌಟುಂಬಿಕ ಜಗಳ: ತಕ್ಷಣ ಎಚ್ಚೆತ್ತ ಪೊಲೀಸರು ಕಾಡಿನ ಸುತ್ತಮುತ್ತ ಹುಡುಕಾಟ ನಡೆಸಿದಾಗ ಅರೆಪ್ರಜ್ಞಾ ಸ್ಥಿತಿಯಲ್ಲಿ ಬಿದ್ದಿದ್ದರು ಎನ್ನಲಾಗಿದೆ. ತಕ್ಷಣ ಪೊಲೀಸರು ವಾಹನದಲ್ಲಿ ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದಾರೆ. ಸುನೀಲ್ ಮಾಲೀಕತ್ವದ ಚಪ್ಪಲ್ ಶಾಪ್ ಹೊಂದಿದ್ದು, ಮದುವೆಯಾಗಿ ಮೂರು ತಿಂಗಳ ಮಗು ಕೂಡ ಇದ್ದು, ಗಂಡ ಹೆಂಡತಿ ನಡುವೆ ನಡೆದ ಜಗಳದಿಂದ ಬೇಸರಗೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ:ಸ್ಕೂಟರ್ ಡಿಕ್ಕಿ ತಪ್ಪಿಸಲು ಹೋಗಿ ಮರಕ್ಕೆ ಗುದ್ದಿದ ಕಂಟೈನರ್..