ಮಂಗಳೂರು: ಕೃಷ್ಣ ಮೃಗ ಮತ್ತು ಜಿಂಕೆಯ ಕೊಂಬುಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಓರ್ವನನ್ನು ಸಿಐಡಿ ಅರಣ್ಯ ಸಂಚಾರಿ ದಳ ಮತ್ತು ಬಂಟ್ವಾಳ ಅರಣ್ಯ ಇಲಾಖಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಮಂಗಳೂರು ತಾಲೂಕು ಕಂಕನಾಡಿ ಗ್ರಾಮದ ಉಜ್ಜೋಡಿ ನಿವಾಸಿ ದಿಲೀಪ್ ಕುಮಾರ್ ಜಿ. (30) ಬಂಧಿತ ಆರೋಪಿ. ಈತ ಕೃಷ್ಣ ಮೃಗ ಮತ್ತು ಜಿಂಕೆಯ ಕೊಂಬುಗಳನ್ನು ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಮಂಗಳೂರಿನಿಂದ ಬಿ.ಸಿ.ರೋಡ್ ಕಡೆಗೆ ಬರುತ್ತಿದ್ದನು. ಇದರ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಸಂಚಾರಿ ದಳದ ಪೊಲೀಸರು ಹಾಗೂ ಬಂಟ್ವಾಳ ಅರಣ್ಯ ಅಧಿಕಾರಿಗಳು ತುಂಬೆ ಗ್ರಾಮದ ಬಂಟರ ಭವನದ ಬಳಿಯ ವಳವೂರು ಎಂಬಲ್ಲಿ ದಾಳಿ ನಡೆಸಿ ಬಂಧಿಸಿದ್ದಾರೆ.
ಬಂಧಿತನಿಂದ ಲಕ್ಷಾಂತರ ರೂ. ಮೌಲ್ಯದ ಕೃಷ್ಣ ಮೃಗದ ಎರಡು ಕೊಂಬುಗಳು ಹಾಗೂ ಜಿಂಕೆಯ ನಾಲ್ಕು ಕೊಂಬುಗಳು ಹಾಗೂ ಮೂರು ಲಕ್ಷ ರೂ. ಮೌಲ್ಯದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಮುಂದಿನ ಕಾನೂನು ಕ್ರಮಕ್ಕಾಗಿ ಬಂಟ್ವಾಳ ವಲಯ ಅರಣ್ಯ ಅಧಿಕಾರಿಗಳಿಗೆ ಕೊಂಬುಗಳನ್ನು ಹಸ್ತಾಂತರ ಮಾಡಲಾಗಿದೆ.
ಸಿಐಡಿ ಅರಣ್ಯ ಘಟಕ ಬೆಂಗಳೂರು ಎ.ಡಿ.ಜಿ.ಪಿ ಡಾ.ರವೀಂದ್ರನಾಥನ್ ಮತ್ತು ಸಿ.ಐ.ಡಿ.ಅರಣ್ಯ ಮಡಿಕೇರಿ ಘಟಕದ ಪೊಲೀಸ್ ಅಧೀಕ್ಷಕ ಸುರೇಶ್ ಬಾಬು ಕಾರ್ಯಾಚರಣೆಯ,ಲ್ಲಿ ಭಾಗಿಯಾಗಿದ್ದರು., ಮಂಗಳೂರು ಸಿ.ಐ.ಡಿ.ಅರಣ್ಯ ಸಂಚಾರಿ ದಳದ ಪಿ.ಎಸ್.ಐ. ಪುರುಷೋತ್ತಮ, ಸಿಬ್ಬಂದಿಗಳಾದ ಜಗನ್ನಾಥ ಶೆಟ್ಟಿ, ಉದಯ ನಾಯ್ಕ, ಮಹೇಶ್, ದೇವರಾಜ್ , ಪ್ರವೀಣ್ ಸುಂದರ್ ಶೆಟ್ಟಿ ಹಾಗೂ ಬಂಟ್ವಾಳ ಅರಣ್ಯ ವಲಯ ಅಧಿಕಾರಿ ಸುರೇಶ್ ಸಿಬ್ಬಂದಿಗಳಾದ ಪ್ರೀತಂ, ವಿನಯ್, ಜಿತೇಶ್ ಪಾಲ್ಗೊಂಡಿದ್ದರು.