ಮಂಗಳೂರು :ದೇಶಾದ್ಯಂತ ಸ್ಥಳೀಯ ಸಂಸ್ಥೆಗಳಿಗೆ ತ್ಯಾಜ್ಯ ನಿರ್ವಹಣೆಯೇ ಅತಿ ದೊಡ್ಡ ಸವಾಲಾಗಿದೆ. ಪ್ರತಿದಿನ ಶೇಖರಣೆಯಾಗುವ ಕಸ ವಿಲೇವಾರಿ ಮಾಡುವುದೇ ತಲೆನೋವಾಗಿ ಪರಿಣಮಿಸಿದೆ. ಆದರೆ, ಇಲ್ಲೊಂದು ನಗರಸಭೆ ಹಸಿ ಕಸದಿಂದ ಸಾವಯವ ಗೊಬ್ಬರ ತಯಾರಿಸಿ, ಇತರರಿಗೆ ಮಾದರಿಯಾಗಿದೆ.
ಸ್ಥಳೀಯ ನಗರಸಭೆಗಳು ದಿನಂಪ್ರತಿ ಶೇಖರವಾಗುವ ಕಸವನ್ನು ವಿಲೇವಾರಿ ಮಾಡಲು ಸಾಧ್ಯವಾಗದೆ ಒದ್ದಾಡುತ್ತಿವೆ. ಆದರೆ, ಮಂಗಳೂರಿನ ಉಳ್ಳಾಲ ನಗರಸಭೆಯು ಹಸಿ ಕಸದ ಸಮಸ್ಯೆಗೆ ಪರಿಹಾರ ಕಂಡುಕೊಂಡಿದೆ.
ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ದಿನಂಪ್ರತಿ 11 ಟನ್ ತ್ಯಾಜ್ಯ ಸಂಗ್ರಹವಾಗುತ್ತಿದೆ. ಇದರಲ್ಲಿ ನಾಲ್ಕು ಟನ್ ಕಸವನ್ನು ಗೊಬ್ಬರ ಮಾಡುವ ಪ್ರಯತ್ನಕ್ಕೆ ನಗರಸಭೆ ಕೈ ಹಾಕಿ ಯಶಸ್ಸು ಕಂಡಿದೆ. ಉಳ್ಳಾಲ ಬ್ರಾಂಡ್ ಹೆಸರಿನಲ್ಲಿ ಕಸದಿಂದ ಸಾವಯವ ಗೊಬ್ಬರ ಮಾಡುವ ಪ್ರಯತ್ನಕ್ಕೆ ಶಾಸಕ ಯು ಟಿ ಖಾದರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸ್ವಂತ ಉದ್ಯಮ ಆರಂಭಿಸಿ, ಮಹಿಳೆಯರಿಗೆ ಉದ್ಯೋಗ ಕೊಟ್ಟ ಕಲಬುರಗಿಯ ಎಂಬಿಎ ಪದವೀಧರ
ನಗರಸಭೆಯ ಈ ಕಾರ್ಯದಿಂದಾಗಿ ಆದಾಯವೂ ಹರಿದು ಬರುತ್ತಿದೆ. ಸದ್ಯ ಉಳ್ಳಾಲ ನಗರಸಭೆಯಿಂದ ಆರಂಭಿಸಲಾಗಿರುವ ಈ ವಿನೂತನ ಪ್ರಯತ್ನಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಈ ಗೊಬ್ಬರಕ್ಕೆ 10 ಕೆಜಿಗೆ 100 ರೂಪಾಯಿಯಂತೆ ನಿಗದಿ ಪಡಿಸಿ ಮಾರಾಟ ಮಾಡಲು ನಗರಸಭೆ ನಿರ್ಧರಿಸಿದೆ.