ಕರ್ನಾಟಕ

karnataka

ETV Bharat / state

ಹೋಂ ಐಸೋಲೇಶನ್​​​ನಲ್ಲಿರುವವರ ಆರೋಗ್ಯ ವಿಚಾರಣೆಗೆ ವೈದ್ಯಕೀಯ ತಂಡ ರಚಿಸಿ: ಸಚಿವ ಕೋಟ ಸೂಚನೆ - ಹೋಂ ಐಸೋಲೇಶನ್​​​ನಲ್ಲಿರುವವರ ಆರೋಗ್ಯ ವಿಚಾರಣೆ

ನಿನ್ನೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋವಿಡ್​ ಕುರಿತ ಸಭೆ ನಡೆಸಲಾಯಿತು. ಈ ವೇಳೆ ಹೋಂ ಐಸೋಲೇಶನ್​​​ನಲ್ಲಿರುವವರ ಆರೋಗ್ಯ ವಿಚಾರಣೆ ಸೂಕ್ತ ರೀತಿಯಲ್ಲಾಗಬೇಕು ಮತ್ತು ಅದಕ್ಕೆ ತಂಡ ರಚಿಸಿ ಎಂದು ಜಿಲ್ಲಾಡಳಿತಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು.

meeting in dakshina kannada dc office
ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆ

By

Published : May 6, 2021, 7:15 AM IST

ಮಂಗಳೂರು: ಕೊರೊನಾ ಸೋಂಕು ಧೃಡಪಟ್ಟಿರುವವರಲ್ಲಿ ಶೇಕಡ 85.70ಕ್ಕೂ ಹೆಚ್ಚು ಮಂದಿ ಹೋಮ್ ಐಸೋಲೇಶನ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಆರೋಗ್ಯ ಕ್ಷೇಮವನ್ನು ವಿಚಾರಿಸಲು ವೈದ್ಯಕೀಯ ತಂಡಗಳನ್ನು ರಚನೆ ಮಾಡುವುದರೊಂದಿಗೆ ಅವರುಗಳಿಗೆ ಸೂಕ್ತ ಚಿಕಿತ್ಸೆ ಕೊಡಲು ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು.

ನಿನ್ನೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ, ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ವೈದ್ಯಕೀಯ ತಜ್ಞರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ 8,414 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು ಅವುಗಳಲ್ಲಿ 1,204 ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 7,210 ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು ರೋಗಿಗಳ ಪೈಕಿ ಶೇ.14.30 ರಷ್ಟು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಬಾಕಿ ಉಳಿದವರು ಹೋಮ್ ಐಸೋಲೇಷನ್​​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಶೇ.75 ರಷ್ಟು ಮಂದಿ ನಗರ ಪ್ರದೇಶದ ವ್ಯಾಪ್ತಿಯವರೇ ಇದ್ದಾರೆ. ಅವರುಗಳಿಗೆ ಸೂಕ್ತ ಚಿಕಿತ್ಸೆ ನೀಡುವುದರ ಜತೆಗೆ ಅವರ ಯೋಗಕ್ಷೇಮ ಪ್ರತಿದಿನ ವಿಚಾರಿಸಬೇಕು ಎಂದರು.

ಹೋಮ್ ಐಸೋಲೇಷನ್​ಗೆ ಒಳಗಾದವರಿಗೆ ಸೂಕ್ತ ಚಿಕಿತ್ಸೆ ನೀಡಲು ವೈದ್ಯರನ್ನು ಒಳಗೊಂಡ 78ಕ್ಕೂ ಹೆಚ್ಚು ತಂಡಗಳನ್ನು ರಚಿಸುವುದರೊಂದಿಗೆ ಅವರುಗಳು ಮನೆಮನೆಗೆ ಭೇಟಿ ನೀಡಿ ಕೋವಿಡ್ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಒದಗಿಸಬೇಕು. ಇವುಗಳ ಮೇಲ್ವಿಚಾರಣೆ ಮಾಡಲು ಸಹ ಅಧಿಕಾರಿಗಳನ್ನು ನೇಮಕ ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ರೋಗಿಗಳಲ್ಲಿ 45 ವರ್ಷ ಮೇಲ್ಪಟ್ಟ ಹಾಗೂ 45 ವರ್ಷ ದೊಳಗಿನ ರೋಗಿಗಳ ಮಾಹಿತಿ ಕಲೆ ಹಾಕುವುದರೊಂದಿಗೆ ಅವರುಗಳಲ್ಲಿ ರಕ್ತದೊತ್ತಡದಿಂದ ಬಳಲುವವರು, ಮಧುಮೇಹ ಸೇರಿದಂತೆ ಮತ್ತಿತರ ಕಾಯಿಲೆ ಹೊಂದಿರುವವರನ್ನು ಗುರುತಿಸುವುದರೊಂದಿಗೆ ಅವರುಗಳ ರಕ್ತ ಪರೀಕ್ಷೆ ಮತ್ತಿತರೆ ಪರೀಕ್ಷೆಗಳನ್ನು ಮಾಡಬೇಕು. ಜತೆಗೆ ಇನ್ನಿತರೆ ತೊಂದರೆಗಳಾದಲ್ಲಿ ಚಿಕಿತ್ಸೆ ನೀಡಬೇಕು ಎಂದು ಹೇಳಿದರು.

ಜನರು ದಿನನಿತ್ಯದ ಅವಶ್ಯಕ ವಸ್ತುಗಳನ್ನು ಖರೀದಿಸಲು ಸಮಯ ನಿಗದಿಪಡಿಸಲಾಗಿದೆ. ಆದರೆ ಕೆಲವರು ಯಾವುದೇ ಅವಶ್ಯಕ ಕೆಲಸವಿಲ್ಲದಿರುವವರು ಅನಗತ್ಯವಾಗಿ ತಿರುಗಾಡುವುದು ಕಂಡುಬರುತ್ತಿದೆ. ಇದಕ್ಕೆ ಜನರು ಕಡಿವಾಣ ಹಾಕಬೇಕು, ಅಧಿಕಾರಿಗಳು ಪರಿಶೀಲಿಸಬೇಕು ಎಂದರು.

ಖಾಸಗಿ ನರ್ಸಿಂಗ್ ಹೋಮ್​ಗಳಲ್ಲಿ ಕೊರೊನಾ ಚಿಕಿತ್ಸೆ ಪಡೆಯುತ್ತಿರುವವರಿಂದ ಸರ್ಕಾರ ನಿಗದಿ ಪಡಿಸಿರುವ ದರವನ್ನು ಮಾತ್ರ ತೆಗೆದುಕೊಳ್ಳಬೇಕು. ಆದರೆ ಕೆಲವರು ಹೆಚ್ಚು ಶುಲ್ಕ ಪಡೆಯುತ್ತಿರುವ ಬಗ್ಗೆ ದೂರುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ. ಹೀಗಾಗದಂತೆ ನೋಡಿಕೊಳ್ಳಬೇಕು. ಕೆಲವೊಮ್ಮೆ ಹೆಚ್ಚು ದರ ಪಡೆದಿದ್ದು ಕಂಡುಬಂದಲ್ಲಿ, ಜಿಲ್ಲಾ ಆರೋಗ್ಯ ಅಧಿಕಾರಿಗಳ ಕಚೇರಿಗೆ ದೂರು ನೀಡಿದಲ್ಲಿ ಹೆಚ್ಚು ಶುಲ್ಕವನ್ನು ಮರು ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ರೆಮಿಡಿಸಿವಿರ್ ಔಷಧಿ ಕೊರೊನಾ ಸೋಂಕಿತರೆಲ್ಲರಿಗೂ ಅವಶ್ಯಕತೆ ಇರುವುದಿಲ್ಲ. ಪ್ರಾರಂಭದ ಹಂತದಲ್ಲಿ ಉಸಿರಾಟದ ತೊಂದರೆ ಇರುವಂತವರಿಗೆ ನೀಡುವುದು ಎಂದು ದೇಶದ ವೈದ್ಯಕೀಯ ಸಂಸ್ಥೆಗಳು ತಿಳಿಸಿವೆ. ಅಗತ್ಯ ಇರುವ ರೋಗಿಗಳಿಗೆ ಮಾತ್ರ ಈ ಔಷಧಿಯನ್ನು ನೀಡಬೇಕು ಎಂದು ಸಲಹೆ ನೀಡಿದರು.

ಇದನ್ನೂ ಓದಿ:ಮಾರುಕಟ್ಟೆಗೆ ಬಂದಿದೆ ಪರಿಸರ ಸ್ನೇಹಿ ಮಾಸ್ಕ್: ​ಬಳಸಿದ ಬಳಿಕ ಮಣ್ಣಿಗೆ ಹಾಕಿದರೆ ಬೆಳೆಯುತ್ತೆ ಗಿಡ!

ನಳಿನ್ ಕುಮಾರ್ ಕಟೀಲ್ ಮಾತನಾಡಿ, ಕೆಲವೊಮ್ಮೆ ಕೊರೊನಾ ದೃಢಪಟ್ಟು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವಂತವರು ತೀವ್ರ ತರದ ಉಸಿರಾಟದ ಸಮಸ್ಯೆ ಉಂಟಾಗಿ ಕೊನೆ ಘಳಿಗೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬರುತ್ತಾರೆ. ಇದಕ್ಕೆ ಆಸ್ಪದ ನೀಡಬಾರದು. ಸೋಂಕಿತರು ತಮಗಾಗುವ ತೊಂದರೆಗಳನ್ನು ಪ್ರತಿದಿನ ಕಂಟ್ರೋಲ್ ರೂಮ್​ನಲ್ಲಿ ಕಾರ್ಯನಿರ್ವಹಿಸುವ ವೈದ್ಯಾಧಿಕಾರಿಗಳು ಹಾಗೂ ಎ.ಎನ್.ಎಂ ಗಳನ್ನು ಸಂಪರ್ಕಿಸಿ ಮಾಹಿತಿ ನೀಡಬೇಕು ಎಂದರು. ಮನೆಯಲ್ಲಿಯೇ ಚಿಕಿತ್ಸೆ ಪಡೆಯುವವರ ಯೋಗಕ್ಷೇಮ ವಿಚಾರಿಸಲು ಜಿಲ್ಲೆಯ 8 ಮೆಡಿಕಲ್ ಕಾಲೇಜಿನ ಮೆಡಿಕಲ್ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಬೇಕೆಂದು ಅವರು ಸಲಹೆ ಮಾಡಿದರು. ಸೋಂಕು ಬಂದು ಹೋಂ ಐಸೊಲೇಶನ್‍ನಲ್ಲಿ ಇರುವವರು ಏನೆಲ್ಲ ಜವಾಬ್ದಾರಿಗಳನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಮಾಹಿತಿಯನ್ನು ಒಳಗೊಂಡ ವೀಡಿಯೋ ಚಿತ್ರೀಕರಣ ಮಾಡುವುದರೊಂದಿಗೆ ಜನರಿಗೆ ತಲುಪಿಸಬೇಕು ಎಂದರು.

ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಮಾತನಾಡಿ, ಮುಂಬರುವ ದಿನಗಳಲ್ಲಿ ಕೊರೊನಾ ಪ್ರಕರಣಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅಂತವರಿಗೆ ಚಿಕಿತ್ಸೆ ನೀಡಲು ವೆಂಟಿಲೇಟರ್​ಗಳು ಹಾಗೂ ವೆಂಟಿಲೇಟರ್​ಗಳನ್ನು ಒಳಗೊಂಡ ಆಂಬುಲೆನ್ಸ್ ಗಳನ್ನು ಜಿಲ್ಲಾಡಳಿತದಿಂದ ಒದಗಿಸಲಾಗುವುದು. ಅದಕ್ಕೆ ಅಗತ್ಯವಿರುವ ಸಿದ್ಧತೆಗಳನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ತಿಳಿಸಿದರು. ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಕೊರತೆ ಇರುವಲ್ಲಿ ವೈದ್ಯರುಗಳು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ತುಂಬಲಾಗುವುದು ಎಂದರು.

ಜಿಲ್ಲೆಯಲ್ಲಿ ಕೆಲವು ಖಾಸಗಿ ಸಂಸ್ಥೆಗಳು ಧಾರ್ಮಿಕ ಸಂಸ್ಥೆಗಳು ಕೊರೊನಾ ಕೇರ್ ಸೆಂಟರ್​ಗಳನ್ನು ತೆಗೆಯಲು ಮುಂದೆ ಬರುತ್ತಿವೆ. ಈ ರೀತಿ ಕೋವಿಡ್ ಕೇರ್ ಸೆಂಟರ್​ಗಳನ್ನು ತೆಗೆಯುವ ಮುನ್ನ ರೋಗಿಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ಪರಿಶೀಲನೆ ನಡೆಸಿ ಒಪ್ಪಿಗೆ ನೀಡಿದ ನಂತರ ತೆರೆಯಲು ಮುಂದಾಗಬೇಕು ಎಂದರು.

ABOUT THE AUTHOR

...view details