ಕರ್ನಾಟಕ

karnataka

ETV Bharat / state

Menstrual cup: ವಿದ್ಯಾರ್ಥಿನಿಯರಿಗೆ ಮೈತ್ರಿ ಮುಟ್ಟಿನ ಕಪ್ ವಿತರಣೆಗೆ ಮಂಗಳೂರಿನಲ್ಲಿ ಚಾಲನೆ.. ಮುಂದಿನ ತಿಂಗಳು ರಾಜ್ಯಾದ್ಯಂತ ಯೋಜನೆ ಜಾರಿ - Maitri Menstrual Cups

Menstrual Cups Distribution female students: ಇಂದು ಒಂದೇ ದಿನ 15 ಸಾವಿರ ವಿದ್ಯಾರ್ಥಿನಿಯರಿಗೆ ಮಂಗಳೂರಿನಲ್ಲಿ ಮೆನ್​ಸ್ಟ್ರುವಲ್ ಕಪ್ ವಿತರಣೆ ಮಾಡಲಾಯಿತು.

Distribution of Maitri Menstrual Cups to female students Inaugurated in Mangalore
ವಿದ್ಯಾರ್ಥಿನಿಯರಿಗೆ ಮೈತ್ರಿ ಮುಟ್ಟಿನ ಕಪ್ ವಿತರಣೆಗೆ ಮಂಗಳೂರಿನಲ್ಲಿ ಚಾಲನೆ

By ETV Bharat Karnataka Team

Published : Sep 11, 2023, 6:54 PM IST

Updated : Sep 12, 2023, 12:22 PM IST

ವಿದ್ಯಾರ್ಥಿನಿಯರಿಗೆ ಮೈತ್ರಿ ಮುಟ್ಟಿನ ಕಪ್ ವಿತರಣೆಗೆ ಮಂಗಳೂರಿನಲ್ಲಿ ಚಾಲನೆ

ಮಂಗಳೂರು: ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪಿಯುಸಿವರೆಗಿನ‌ ವಿದ್ಯಾರ್ಥಿನಿಯರಿಗೆ ನೀಡುವ ಮೈತ್ರಿ ಮುಟ್ಟಿನ ಕಪ್ ವಿತರಣೆ ಯೋಜನೆಗೆ ಮಂಗಳೂರಿನಲ್ಲಿ ಇಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು. ನಗರದ ನೆಹರು ಮೈದಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಈ ರಾಜ್ಯ ಮಟ್ಟದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮಕ್ಕೆ ಚಾಲನೆ‌ ನೀಡಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಪ್ರತಿಯೊಬ್ಬ ವಿದ್ಯಾರ್ಥಿನಿಯರು ಮೈತ್ರಿ ಯೋಜನೆಯ ರಾಯಭಾರಿಗಳಾಗಿ, ಮುಟ್ಟಿನ ಕಪ್ ಹೆಚ್ಚು ಹೆಚ್ಚು ಬಳಕೆಗೆ ಪ್ರೇರಕರಾಗಬೇಕು. ಮೈತ್ರಿ ಯೋಜನೆ ಮಂಗಳೂರಿನಲ್ಲಿ ಯಶಸ್ವಿಯಾಗಿದೆ. ಆದ್ದರಿಂದ ಇದನ್ನು ರಾಜ್ಯಾದ್ಯಂತ ತೆಗೆದುಕೊಂಡು ಹೋಗಲಿದ್ದೇವೆ. ಮುಂದಿನ ತಿಂಗಳು ರಾಜ್ಯದಲ್ಲಿ ಪಿಯುಸಿವರೆಗಿನ 40 ಲಕ್ಷ ವಿದ್ಯಾರ್ಥಿನಿಯರಿಗೆ ಹಂಚಿಕೆ ಮಾಡಲಾಗುವುದು ಎಂದರು.

ವಿದ್ಯಾರ್ಥಿನಿಯರಿಗೆ ಮೈತ್ರಿ ಮುಟ್ಟಿನ ಕಪ್ ವಿತರಣೆಗೆ ಮಂಗಳೂರಿನಲ್ಲಿ ಚಾಲನೆ

ಇಂದು ಮಂಗಳೂರಿನಲ್ಲಿ‌ 11 ಸಾವಿರ ಹಾಗೂ ಚಾಮರಾಜನಗರದಲ್ಲಿ 4 ಸಾವಿರ ಮೈತ್ರಿ ಯೋಜನೆಯ ಮುಟ್ಟಿನ ಕಪ್ ಸೇರಿ ಒಟ್ಟು 15 ಸಾವಿರ ಪಿಯುಸಿವರೆಗಿನ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಮುಟ್ಟಿನ ಕಪ್ ವಿತರಣೆ ಮಾಡಲಾಗಿದೆ. ಋತುಚಕ್ರದ ವೇಳೆ ಮಹಿಳೆಯರಿಗೆ ಎಲ್ಲದಕ್ಕೂ ಅನಾನುಕೂಲವಾಗುತ್ತದೆ. ಆದ್ದರಿಂದ ಅಂತಹ ಸನ್ನಿವೇಶ ಸೃಷ್ಟಿಯಾಗದಿರಲೆಂದು ಹಿಂದಿನ ಸಿದ್ದರಾಮಯ್ಯ ಸರ್ಕಾರ ಸ್ಯಾನಿಟರಿ ಪ್ಯಾಡ್ ವಿತರಣೆ ಮಾಡಿತ್ತು. ಇದೀಗ ಮೂರು ವರ್ಷಗಳ ಬಳಿಕ ಸರ್ಕಾರ ಮೈತ್ರಿ ಯೋಜನೆಯ ಮೂಲಕ ಹೊಸದಾಗಿ ಮುಟ್ಟಿನ ಕಪ್ ವಿತರಣೆ ಮಾಡುತ್ತಿದೆ. ಈ ಮೂಲಕ ರಾಜ್ಯದ ಸರ್ಕಾರಿ ಶಾಲಾ - ಕಾಲೇಜುಗಳ 40 ಲಕ್ಷ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಮುಟ್ಟಿನ ಕಪ್ ವಿತರಣೆ ಮಾಡಲಾಗುತ್ತದೆ ಎಂದರು.

ಈ ಮುಟ್ಟಿನ ಕಪ್​ನಿಂದ ಮಹಿಳೆಯರಿಗೆ ಹಣ ಉಳಿತಾಯವಾಗಲಿದೆ. ಅಲ್ಲದೆ ಋತುಚಕ್ರದ ದಿನಗಳಲ್ಲಿ ಮುಟ್ಟಿನ ಕಪ್ ಧರಿಸಿ ಹೆಣ್ಣುಮಕ್ಕಳು ಧೈರ್ಯವಾಗಿ ಸಂಕೋಚವಿಲ್ಲದೆ ಹೋಗಬಹುದು. ಸ್ಯಾನಿಟರಿ ಪ್ಯಾಡ್ ಸಾಕಷ್ಟು ತ್ಯಾಜ್ಯ ಸೃಷ್ಟಿಸಿ ಪರಿಸರಕ್ಕೆ ಮಾರಕವಾಗಿದೆ. ಆದರೆ ಮುಟ್ಟಿನ ಕಪ್ ಪರಿಸರ ಸ್ನೇಹಿಯಾಗಿದೆ. ಒಂದು ಮುಟ್ಟಿನ ಕಪ್ ಅನ್ನು ಕನಿಷ್ಠವೆಂದರೆ ಐದು ವರ್ಷಗಳ ಕಾಲ ಮರುಬಳಕೆ ಮಾಡಬಹುದು. ಮೊದಲಾಗಿ ಈ ಮುಟ್ಟಿನ ಕಪ್ ಅನ್ನು ಆರು ತಿಂಗಳ ಕಾಲ ಪ್ರಾಯೋಗಿಕವಾಗಿ ಬಳಸಿದಾಗ ಹೆಣ್ಣು ಮಕ್ಕಳ ತಾಯಂದಿರೇ ಇದಕ್ಕೆ ವಿರೋಧವಿದ್ದರು. ಆದ್ದರಿಂದ ತಾಯಂದಿರಿಗೂ ಜಾಗೃತಿ ಮೂಡಿಸಲಾಗಿತ್ತು ಎಂದು ದಿನೇಶ್ ಗುಂಡೂರಾವ್ ಹೇಳಿದರು.

ವಿದ್ಯಾರ್ಥಿನಿಯರಿಗೆ ಮೈತ್ರಿ ಮುಟ್ಟಿನ ಕಪ್ ವಿತರಣೆಗೆ ಮಂಗಳೂರಿನಲ್ಲಿ ಚಾಲನೆ

ವಿಧಾನಸಭೆಯ ಸ್ಪೀಕರ್ ಯು ಟಿ‌ ಖಾದರ್ ಮಾತನಾಡಿ, ಶ್ರೀಮಂತರು ಬಳಸುವ ವ್ಯವಸ್ಥೆ ಕಡುಬಡವರಿಗೂ ಸಿಗಬೇಕೆಂದು ಮೈತ್ರಿ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಆರೋಗ್ಯವಂತ ಮಕ್ಕಳಿಂದ ಬಲಿಷ್ಠ ಭಾರತದ ನಿರ್ಮಾಣ ಸಾಧ್ಯ. ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ, ಪರಿಸರ ಜಾಗೃತಿಯ ಹಿನ್ನೆಲೆಯಲ್ಲಿ ಈ ಯೋಜನೆ ಸಹಕಾರಿ. ಆದ್ದರಿಂದ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ವಿದ್ಯಾರ್ಥಿನಿಯರು ತಮ್ಮ ತಮ್ಮ ಪ್ರದೇಶಗಳಲ್ಲಿ ಮೈತ್ರಿ ಯೋಜನೆಯ ರಾಯಭಾರಿಗಳಾಗಬೇಕು ಎಂದು ಕರೆ ನೀಡಿದರು.

ಮೈತ್ರಿ ಯೋಜನೆಯ ರಾಯಭಾರಿ, ಚಲನಚಿತ್ರ ನಟಿ ಸಪ್ತಮಿ ಗೌಡ ಮಾತನಾಡಿ, ತಾನು ಸ್ವಿಮ್ಮಿಂಗ್​ನಲ್ಲಿ ಮೊದಲ ಬಾರಿಗೆ ಚಿನ್ನದ ಪದಕ ಪಡೆದಿದ್ದು ಮಂಗಳೂರಿನಲ್ಲಿ. ಸಿನಿಮಾದಲ್ಲಿ ಹೆಸರು ಬಂದಿದ್ದು ಮಂಗಳೂರಿನಿಂದಲೇ. ಅದೇ ರೀತಿ ಮೈತ್ರಿ ಯೋಜನೆಗೆ ರಾಯಭಾರಿಯಾಗಿ ಮಂಗಳೂರಿನಿಂದಲೇ ಕಾರ್ಯಕ್ರಮಕ್ಕೆ ಚಾಲನೆ ನೀಡಿರುವುದಕ್ಕೆ ಹೆಮ್ಮೆಯಿದೆ. ಹೆಣ್ಣುಮಕ್ಕಳು ಎಲ್ಲಾ ಕ್ಷೇತ್ರಗಳಲ್ಲೂ ಮುಂದಿದ್ದಾರೆ. ಆದರೆ ಮುಟ್ಟಿನ ಕಾರಣಕ್ಕೆ ಹಿಂದೆ ಉಳಿಯಬಾರದು. ಪ್ಯಾಡ್​ನ ತ್ಯಾಜ್ಯವನ್ನು ಎಸೆಯೋದು ಹೇಗೆ ಎಂಬುದೇ ಕಷ್ಟ. ಆದರೆ ಮುಟ್ಟಿನ ಕಪ್​ನಿಂದ ಅಂತಹ ಯಾವುದೇ ತೊಂದರೆಯಿಲ್ಲ ಎಂದರು.

ಮುಟ್ಟಿನ ಕಪ್ ಪ್ರಯೋಜನ:ಸ್ಯಾನಿಟರಿ‌ ನ್ಯಾಪ್ಕಿನ್​ಗೆ ಪರ್ಯಾಯವಾಗಿ ಪರಿಸರ ಸ್ನೇಹಿಯಾಗಿದೆ. ಇದು ಹಲವು ವರ್ಷ ಬಾಳಿಕೆ ಬರುವ ಸಾಧನ. ಹೆಣ್ಣು ಮಕ್ಕಳಲ್ಲಿ ಮುಟ್ಟಿನ ನಿರ್ವಹಣೆಗೆ ಸೂಕ್ತ ಸಾಧನವಾಗಿರುವ ಹಾಗೂ ಮರುಬಳಕೆ ಮಾಡಬಹುದಾದ ಮುಟ್ಟಿನ ಕಪ್​ಗಳ ಬಗ್ಗೆ ಮಾಹಿತಿ ನೀಡಿ, ಕಪ್‌ಗಳ ಬಳಕೆಯನ್ನು ಪ್ರೋತ್ಸಾಹಿಸಲು ಉದ್ದೇಶಿಸಲಾಗಿದೆ. ಪ್ರಥಮ ಹಂತದಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಸುಮಾರು 300 ಫಲಾನುಭವಿಗಳಿಗೆ ಮೆನ್​ಸ್ಟ್ರುವಲ್ ಕಪ್​ಗಳನ್ನು ವಿತರಿಸಿ ಅಧ್ಯಯನ ನಡೆಸಲಾಗಿತ್ತು.‌ ಸುಮಾರು 272 ಹೆಣ್ಣು ಮಕ್ಕಳು ಮುಟ್ಟಿನ ಕಪ್​ಗಳನ್ನು ಸ್ವೀಕರಿಸಿ ಯಶಸ್ವಿಯಾಗಿ ಬಳಕೆ ಮಾಡುತ್ತಿದ್ದಾರೆ.

ನ್ಯಾಪ್ಕಿನ್​ಗಳಿಗೆ ಪರ್ಯಾಯವಾಗಿ ಮೆನ್​ಸ್ಟ್ರುವಲ್ ಕಪ್​ಗಳಿಗೆ ಉತ್ತಮ ಸ್ಪಂದನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ಜಿಲ್ಲೆಗಳ ಮಟ್ಟಕ್ಕೆ ಪ್ರಯೋಗ ನಡೆಸಿ, ರಾಜ್ಯಾದ್ಯಂತ ಯೋಜನೆ ವಿಸ್ತರಿಸಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಿಂತನೆ ನಡೆಸಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಆರಂಭಿಸಲಾಗಿದ್ದ ಶುಚಿ ಯೋಜನೆ ಕೋವಿಡ್ ಸಂದರ್ಭದಲ್ಲಿ ಸ್ಥಗಿತಗೊಂಡಿತ್ತು. ಇದೀಗ ದಿನೇಶ್ ಗುಂಡೂರಾವ್ ಆರೋಗ್ಯ ಸಚಿವರಾದ ಬಳಿಕ ಶುಚಿ ಯೋಜನೆಯನ್ನ ಆದ್ಯತೆ ಮೇರೆಗೆ ಕೈಗೆತ್ತಿಕೊಂಡಿದ್ದಾರೆ. ಸರ್ಕಾರಿ ಹಾಗೂ ಅನುದಾನಿತ ಶಾಲಾ, ಪದವಿ ಪೂರ್ವ ಕಾಲೇಜು, ಹಾಸ್ಟೆಲ್​ಗಳ ವಿದ್ಯಾರ್ಥಿನಿಯರ ಆರೋಗ್ಯದ ಹಿತದೃಷ್ಟಿಯಿಂದ ಯೋಜನೆಗೆ ಆರಂಭಿಸಲಾಗಿದೆ.

ಮುಂದಿನ ತಿಂಗಳು ರಾಜ್ಯದೆಲ್ಲೆಡೆ ವಿಸ್ತರಣೆ: ಮಂಗಳೂರಿನಲ್ಲಿ ಇಂದು ಆರಂಭವಾದ ಮುಟ್ಟಿನ ಕಪ್ ವಿತರಣೆಯನ್ನು ರಾಜ್ಯದೆಲ್ಲೆಡೆ ಮುಂದಿನ ತಿಂಗಳಲ್ಲಿ ವಿತರಣೆಯಾಗಲಿದೆ. ರಾಜ್ಯದ 40 ಲಕ್ಷ ವಿದ್ಯಾರ್ಥಿನಿಯರಿಗೆ ಈ ಯೋಜನೆ ಪ್ರಯೋಜನ ಸಿಗಲಿದೆ.

ಶುಚಿ-ನನ್ನ ಮೈತ್ರಿ ಮುಟ್ಟಿನ ಕಪ್ ಪ್ರಯೋಜನಗಳು:17 ರಿಂದ 18 ವರ್ಷದೊಳಗಿನ ಹದಿಹರೆಯದ ಹೆಣ್ಣು ಮಕ್ಕಳಿಗಾಗಿ ಚಾಲ್ತಿಯಲ್ಲಿರುವ ಶುಚಿ ಕಾರ್ಯಕ್ರಮದಡಿ ಸ್ಯಾನಿಟರಿ ನ್ಯಾಪ್‌ಕಿನ್ ಪ್ಯಾಡ್‌ಗಳ ಜೊತೆಗೆ ಮತ್ತು ಅದರ ಪರ್ಯಾಯ ಹಾಗೂ ಪ್ರಾಯೋಗಿಕವಾಗಿ "ಮೈತ್ರಿ ಮುಟ್ಟಿನ ಕಪ್ "ಗಳನ್ನು ಪೂರೈಸಲಾಗುತ್ತದೆ. ಮೆನ್​ಸ್ಟ್ರುವಲ್ ಕಪ್ (ಮುಟ್ಟಿನ ಕಪ್) ಗಳನ್ನು ಅಧಿಕ ಸಮಯದವರೆಗೆ (8 ಗಂಟೆಗಳ ಅವಧಿ) ಬಳಸಬಹುದು. ಮತ್ತು ಸೂಕ್ತ ನಿರ್ವಹಣೆಯೊಂದಿಗೆ ಕನಿಷ್ಠ 8-10 ವರ್ಷಗಳವರೆಗೆ ಸಮರ್ಥನೀಯವಾಗಿ ಮರುಬಳಕೆ ಮಾಡಬಹುದು. ಮುಟ್ಟಿನ ಕಪ್​ಗಳು ಪರಿಸರಸ್ನೇಹಿಯಾಗಿದ್ದು, ಮರುಬಳಕೆ ಮಾಡಬಹುದಾಗಿರುವುದರಿಂದ ವಿಲೇವಾರಿಯ ಸಮಸ್ಯೆ ಇರುವುದಿಲ್ಲ.

ಇದನ್ನೂ ಓದಿ :ಪದವಿಪೂರ್ವ ವಿದ್ಯಾರ್ಥಿನಿಯರಿಗೆ ಋತುಸ್ರಾವ ಕಪ್ ವಿತರಣೆ: 'ನನ್ನ ಮೈತ್ರಿ' ಯೋಜನೆಗೆ ಮಂಗಳೂರಿನಲ್ಲಿಂದು ಚಾಲನೆ

Last Updated : Sep 12, 2023, 12:22 PM IST

ABOUT THE AUTHOR

...view details