ಮಂಗಳೂರು:ಗಾಂಧೀಜಿಯನ್ನು ಇಡೀ ದೇಶವೇ ಮಹಾತ್ಮ, ರಾಷ್ಟ್ರಪಿತ ಎಂದು ಕರೆದಾಗ ತನ್ನನ್ನು ಈ ರೀತಿಯಲ್ಲಿ ಸಂಭೋದಿಸದಿರಿ ಎಂದಿದ್ದರು. ಆದರೆ ಅಮೆರಿಕದ ಅಧ್ಯಕ್ಷ ಟ್ರಂಪ್ ಮೋದಿಯವರನ್ನು ಭಾರತದ ರಾಷ್ಟ್ರಪಿತ ಎಂದು ಸಂಬೋಧಿಸಿದಾಗ, ಈ ರೀತಿಯಲ್ಲಿ ಕರೆಯದಿರಿ ಎಂಬ ಮಾತು ಮೋದಿಯಿಂದ ಕೇಳಿ ಬರಲಿಲ್ಲ. ಇಬ್ಬರು ರಾಷ್ಟ್ರಪಿತರಿಗೆ ಇರುವ ವ್ಯತ್ಯಾಸವಿದು ಎಂದು ಫೋರಮ್ ಜಸ್ಟಿಸ್ ಅಧ್ಯಕ್ಷ ದಯಾನಾಥ ಕೋಟ್ಯಾನ್ ಹೇಳಿದ್ರು.
ಕಾಲ್ನಡಿಗೆ ಜಾಥಾ ಮೂಲಕ ಮಹಾತ್ಮನಿಗೆ ಗೌರವ ಸಲ್ಲಿಸಿದ ದ.ಕ. ಜಿಲ್ಲಾ ಕಾಂಗ್ರೆಸ್
ಗಾಂಧಿ ಜಯಂತಿಯನ್ನು ನಗರದಲ್ಲಿ ಆಚರಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಕಾಲ್ನಡಿಗೆ ಜಾಥಾ ಮೂಲಕ ಬಾಪೂವಿಗೆ ಗೌರವ ವಂದನೆ ಸಲ್ಲಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ರಾಷ್ಟ್ರಪಿತ ಗಾಂಧೀಜಿಯವರ 150ನೇ ಜಯಂತಿಗೆ ಕಾಲ್ನಡಿಗೆ ಜಾಥ ನಡೆಸಿ ಮಾತಾನಡಿದ ಅವರು, ಟ್ರಂಪ್ ಮೋದಿ ಅವರನ್ನು ರಾಷ್ಟ್ರಪಿತ ಎಂದು ಸಂಬೋಧಿಸಿದ್ದಾರೆ. ನಾವೆಲ್ಲ ಇನ್ನು ಮುಂದೆ ರಾಷ್ಟ್ರಪಿತ ಎಂದೇ ಕರೆಯಬೇಕು. ಇಲ್ಲದಿದ್ದರೆ ನಮ್ಮನ್ನೆಲ್ಲ ದೇಶದ್ರೋಹಿಗಳು ಎಂದು ಕರೆಯುವ ಸಮಯವೂ ಬರಬಹುದು. ಸ್ವ ಹಿತಾಸಕ್ತಿಗಾಗಿ ಯಾವುದೇ ಜನರ ಸ್ವಾತಂತ್ರ್ಯವನ್ನು ಬಲಿಕೊಡುವ ಕೆಲಸ ಆಗುತ್ತಿದೆ. ಸಂವಿಧಾನ ತಿದ್ದುಪಡಿ ಮಾಡದೆ ಕೇವಲ ಸಂಸತ್ ನಿರ್ಧಾರದ ಮೇಲೆ ರಾಜ್ಯವನ್ನು ಇಬ್ಭಾಗ ಮಾಡುವ ಕೆಲಸವಾಗಿದೆ. ಕಾಶ್ಮೀರ ಬೇರೆಯಾಗಿದೆ, ನಾಳೆ ಕರ್ನಾಟಕಕ್ಕೂ ಇದೇ ಪರಿಸ್ಥಿತಿ ಬರಬಹುದು. ಇಂತಹ ಪರಿಸ್ಥಿತಿಯಲ್ಲಿ ದೇಶದ ಜನ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ನಾವು ಕಠಿಣ ಪರಿಸ್ಥಿತಿಯಲ್ಲಿ ಜೀವನ ಕಳೆಯಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಅಭಯಚಂದ್ರ ಜೈನ್, ಶಕುಂತಲಾ ಶೆಟ್ಟಿ, ರಮಾನಾಥ ರೈ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.