ಮಂಗಳೂರು: ಜೀವನದಲ್ಲಿ ಎಷ್ಟು ಹಣ ಸಂಪಾದಿಸಿದರೂ ಯಾರಿಗೂ ತೃಪ್ತಿ ಎಂಬುವುದೇ ಇರುವುದಿಲ್ಲ. ಮಕ್ಕಳಿಗೆ, ಮೊಮ್ಮಕ್ಕಳಿಗೆ ಎಂದು ಮತ್ತೆ ಮತ್ತೆ ಸಂಗ್ರಹಿಸುವವರೇ ಅಧಿಕ ಮಂದಿ. ಆದರೆ, ಇಲ್ಲೊಬ್ಬರು 'ಕೆರೆಯ ನೀರನು ಕೆರೆಗೆ ಚೆಲ್ಲಿ' ಎಂದು ದಾಸವರೇಣ್ಯ ಪುರಂದರದಾಸರು ಹೇಳಿದಂತೆ ಬದುಕಿ ತೋರಿಸಿದ್ದಾರೆ. ಈ ಮೂಲಕ ತಮ್ಮ ಸ್ವಂತ ದುಡಿಮೆಯ ದುಡ್ಡನ್ನೆಲ್ಲಾ ಸುರಿದು ಬೃಹತ್ ಕೆರೆಯೊಂದನ್ನು ನಿರ್ಮಿಸಿ ಅಂತರ್ಜಲ ಹೆಚ್ಚಳ ಮಾಡಲು ಸಂಕಲ್ಪ ಕೈಗೊಂಡಿದ್ದಾರೆ.
ನಗರದ ಸುರತ್ಕಲ್ ಸಮೀಪದ ಕಾಟಿಪಳ್ಳ ಸರ್ಕಲ್ನಿಂದ ಸೂರಿಂಜೆಗೆ ಹೋಗುವ ದಾರಿಯಲ್ಲಿ ಒಂದು ಕಿ.ಮೀ. ದೂರ ಕ್ರಮಿಸಿದರೆ ಕುಲ್ಲಂಗಾಲು ಎಂಬ ಪರಿಸರದಲ್ಲಿ ಈ ಕೆರೆಯನ್ನು ಕಾಣಬಹುದು. ಕುಲ್ಲಂಗಾಲು ಮಾಧವ ಭಟ್ಟರ ಕನಸಿನ ಸಾಕಾರ ರೂಪವಾಗಿ ಈ ಕೆರೆ ನಿರ್ಮಾಣವಾಗಿದೆ. ಸುಮಾರು ಎರಡುವರೆ ಎಕರೆ ವಿಸ್ತಾರವಾದ ಪ್ರಕೃತಿಯ ರಮ್ಯ ಪರಿಸರದ ನಡುವೆ ಕೆರೆ ಇರುವ ಈ ಪ್ರದೇಶಕ್ಕೆ ನಾಗಳಿಕೆ ಎಂದು ಹೆಸರು. ಕೆರೆಯ ಪೂರ್ತಿ ಕಾಮಗಾರಿ ಮುಗಿದಿದ್ದು, ಇದೇ ತಿಂಗಳು 28-29 ರಂದು ಉದ್ಘಾಟನೆ ನಡೆಯಲಿದೆ. ಈ ವರ್ಷ ಮಾಧವ ಭಟ್ಟರಿಗೆ 60 ವರ್ಷ ತುಂಬಲಿದ್ದು, ಅದಕ್ಕಾಗಿ ಷಷ್ಠಿಪೂರ್ತಿ, ಶಾಂತಿ ಎಂದು ಅನಗತ್ಯ ಖರ್ಚು ಮಾಡದೆ ಕೆರೆಯೊಂದನ್ನು ನಿರ್ಮಾಣ ಮಾಡಿ ಸಂತಸ ಪಡುತ್ತಿದ್ದಾರೆ.
ಕೆರೆ ನಿರ್ಮಾಣಕ್ಕಾಗಿ ಕೆ.ಮಾಧವ ಭಟ್ಟರು ತಾವು ಜೀವನಪೂರ್ತಿ ದುಡಿದ ಹಣವನ್ನು ವಿನಿಯೋಗಿಸಿದ್ದಾರೆ. 50 ಲಕ್ಷ ರೂ. ವೆಚ್ಚದಲ್ಲಿ ಕೆರೆ ನಿರ್ಮಾಣದ ಕನಸು ಕಂಡಿದ್ದರೂ, ಗಾರೆ ಕೆಲಸದವರು, ಮೇಸ್ತ್ರಿ, ಸೆಂಟ್ರಿಂಗ್, ಇನ್ನಿತರ ಖರ್ಚು-ವೆಚ್ಚಗಳಲ್ಲಿ ಮಾಧವ ಭಟ್ಟರು ಅಂದುಕೊಂಡದ್ದಕ್ಕಿಂತ ಕಡಿಮೆ ಖರ್ಚಾದ ಪರಿಣಾಮ ಇನ್ನೂ ಹಣ ಉಳಿಕೆಯಾಗಿದೆಯಂತೆ. ಆ ಹಣವನ್ನು ಕೆರೆಯ ಸುತ್ತಲೂ ಸಸ್ಯ ಸಂಪತ್ತು ಬೆಳೆಸಲು ವಿನಿಯೋಗಿಸುತ್ತಾರಂತೆ.
ಕೆರೆ ನಿರ್ಮಾಣಕ್ಕೆ ಮನ್ ಕೀ ಬಾತ್ ಹಾಗೂ ಆಧ್ಯಾತ್ಮಿಕ ಚಿಂತನೆ ಪ್ರೇರಣೆ
ಪ್ರಧಾನಿ ನರೇಂದ್ರ ಮೋದಿಯವರು 'ಮನ್ ಕೀ ಬಾತ್' ನಲ್ಲಿ ಅಂತರ್ಜಲ ಹೆಚ್ಚಳದ ಬಗ್ಗೆ ಮಾತನಾಡಿರುವುದನ್ನು ಕೇಳಿ ಪ್ರೇರಣೆಗೊಂಡು ಕೆ.ಮಾಧವ ಭಟ್ಟರು ಈ ಕೆರೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದಾರಂತೆ. ಅದಷ್ಟೇ ಅಲ್ಲದೆ ತಾವು ಪ್ರತಿನಿತ್ಯ ಮಾಡುವ ಯೋಗ ಹಾಗೂ ಆಧ್ಯಾತ್ಮಿಕ ಚಿಂತನೆಗಳೂ ಇದಕ್ಕೆ ಮೂಲ ಕಾರಣವೆನ್ನುತ್ತಾರೆ. ಜೊತೆಗೆ ಮಾಧವ ಭಟ್ಟರ ತಂದೆ ವೆಂಕಟರಾಜ ಭಟ್ ಕುಲ್ಲಂಗಾಲು ಅವರು ಆಷಾಢ ಮಾಸದಲ್ಲಿ ಈಗ ಕೆರೆಯಿರುವ ಸ್ಥಳದಲ್ಲಿದ್ದ ನಾಗಬನದ ಬಳಿಯಲ್ಲಿ ಧ್ಯಾನ ಮಾಡುತ್ತಿದ್ದು, ಅದರ ಪ್ರೇರಣೆಯಿಂದ ಮಾಧವ ಭಟ್ಟರೂ ಆದಿತ್ಯವಾರ ಈ ಸ್ಥಳಕ್ಕೆ ಬಂದು ನಮಸ್ಕರಿಸಿ ಹೋಗುತ್ತಿದ್ದಾರೆ. ಒಂದು ಬಾರಿ ಇಲ್ಲಿಗೆ ಬಂದಾಗ ಇಲ್ಲಿದ್ದ ಸಣ್ಣ ಮದಕ (ಹಳ್ಳ)ದಲ್ಲಿ ಎರಡು ಹಾವುಗಳು ಈಜಾಡುತ್ತಿತ್ತಂತೆ, ಅಂದೇ ಇಲ್ಲೊಂದು ಇಂಗು ಗುಂಡಿ ಮಾಡಬಹುದು ಎಂದು ಸಂಕಲ್ಪ ಮಾಡಿದ್ದರು. ಅದು ಈಗ ಕೆರೆ ನಿರ್ಮಾಣದ ಮೂಲಕ ಸಾಕಾರಗೊಂಡಿದೆ.
1 ಕೋಟಿ 75 ಲಕ್ಷ ಲೀಟರ್ ನೀರು ತುಂಬುವ ಸಾಧ್ಯತೆ