ಮಂಗಳೂರು : ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ತಿಂಗಳಾಂತ್ಯದೊಳಗೆ ಬಿಡುಗಡೆಯಾಗಲಿದೆ ಎಂದು ಎಐಸಿಸಿ ಚುನಾವಣಾ ಸಮಿತಿ ಸದಸ್ಯ, ಮಾಜಿ ಮುಖ್ಯಮಂತ್ರಿ ಡಾ ಎಂ ವೀರಪ್ಪ ಮೊಯ್ಲಿ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಈಗಾಗಲೇ ಗೆಲ್ಲುವ ಅಭ್ಯರ್ಥಿಗಳ ಕುರಿತು ಎಐಸಿಸಿ ಮತ್ತು ಕೆಪಿಸಿಸಿ ಹಂತದಲ್ಲಿ ಮೂರ್ನಾಲ್ಕು ಸರ್ವೇ ಪೂರ್ಣಗೊಂಡಿದೆ. ಇದೇ ತಿಂಗಳ 7 ಮತ್ತು 8 ಸ್ಕ್ರೀನಿಂಗ್ ಕಮಿಟಿ ಸಭೆ ನಡೆಯಲಿದೆ. ಬಳಿಕ ಪಟ್ಟಿ ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿಗೆ ರವಾನೆಯಾಗಲಿದೆ ಎಂದು ತಿಳಿಸಿದರು.
ಅಮಿತ್ ಶಾ ಗುಜರಾತ್ನಿಂದ ಗಡಿಪಾರು ಆಗಿದ್ದರು- ಮೊಯ್ಲಿ: ರಾಜ್ಯಾದ್ಯಂತ ಕಾಂಗ್ರೆಸ್ ಪರವಾದ ವಾತಾವರಣವಿದೆ. ಬಸವರಾಜ ಬೊಮ್ಮಾಯಿ ರಾಜ್ಯದ ಅತ್ಯಂತ ದುರ್ಬಲ ಮುಖ್ಯಮಂತ್ರಿಯಾಗಿದ್ದಾರೆ. ಪ್ರತಿಯೊಂದಕ್ಕೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಕಡೆ ಕೈ ತೋರಿಸುತ್ತಿದ್ದಾರೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಜೈಲು ಸೇರಿ ಇತಿಹಾಸ ನಿರ್ಮಿಸಿದವರಾಗಿದ್ದಾರೆ. ಅವರಿಗೆ ಮಾರ್ಗದರ್ಶನ ನೀಡುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಅವರು ಜೈಲುವಾಸ ಅನುಭವಿಸಿ ಕೆಲಕಾಲ ಗುಜರಾತ್ ರಾಜ್ಯದಿಂದಲೇ ಗಡಿಪಾರು ಶಿಕ್ಷೆ ಅನುಭವಿಸಿದವರಾಗಿದ್ದಾರೆ ಎಂದು ಮೊಯ್ಲಿ ಲೇವಡಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಸೈಕ್ಲೋನ್ ಥರ ರಾಜ್ಯಕ್ಕೆ ಪದೇ ಪದೆ ಬರ್ತಾ ಇದಾರೆ. ತಮ್ಮ ಪಕ್ಷದ ಪರ ಪ್ರಚಾರ ಮಾಡಲು ಅವರು ರಾಜ್ಯಕ್ಕೆ ಬರುವುದರಲ್ಲಿ ತಪ್ಪಿಲ್ಲ. ಆದರೆ ಅವರಿಗೆ ರಾಜ್ಯದ ಸಮಸ್ಯೆ ಬಗ್ಗೆ ಅರಿವಿಲ್ಲ. ಪ್ರಧಾನಿ ಮೋದಿಗೆ ಮಾಧ್ಯಮಗೋಷ್ಟಿ ನಡೆಸುವ, ಮಾಧ್ಯಮ ಪ್ರತಿನಿಧಿಗಳನ್ನು ಎದುರಿಸುವ ಧೈರ್ಯವೂ ಇಲ್ಲ. ಈ ಹಿಂದೆ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಸಂದರ್ಭ ಕನಿಷ್ಠ ಎರಡು ತಿಂಗಳಿಗೊಮ್ಮೆಯಾದರೂ ಮಾಧ್ಯಮಗೋಷ್ಟಿ, ಸಂವಾದ ನಡೆಸುತ್ತಿದ್ದರು ಎಂದು ಹೇಳಿದರು.