ಕರ್ನಾಟಕ

karnataka

ETV Bharat / state

ದ.ಕನ್ನಡ ಜಿಲ್ಲೆಯಲ್ಲಿ ನಿಂತಲ್ಲೆ ನಿಂತ ಖಾಸಗಿ ಬಸ್​ಗಳು: ಅನ್ಲಾಕ್ ಬಳಿಕ ಪುನಾರಂಭಕ್ಕೆ ಬೇಕು ಅರ್ಧ ಲಕ್ಷ ಹಣ

ಕೋವಿಡ್​ ಲಾಕ್​ ಡೌನ್​ ಎಲ್ಲಾ ಕ್ಷೇತ್ರಗಳ ಮೇಲೂ ಪರಿಣಾಮ ಬೀರಿದೆ. ಅದರಲ್ಲೂ ಜನರಿಗೆ ಸೇವೆ ನೀಡುತ್ತಿದ್ದ ಖಾಸಗಿ ಬಸ್​ಗಳ ಮೇಲೆ ದೊಡ್ಡ ಹೊಡೆತವೇ ನೀಡಿದೆ. ಕರಾವಳಿಯ ಜೀವನಾಡಿ ಖಾಸಗಿ ಬಸ್​ಗಳು ಅನ್​ಲಾಕ್​ ಆದರೂ ರಸ್ತೆಗಿಳಿಯದ ಪರಿಸ್ಥಿತಿಗೆ ಬಂದಿವೆ.

Loss of private bus owners
ಸಂಕಷ್ಟಕ್ಕೆ ಸಿಲುಕಿದ ಕರಾವಳಿಯ ಖಾಸಗಿ ಬಸ್​ ಮಾಲಕರು

By

Published : Jun 15, 2021, 12:00 PM IST

ಮಂಗಳೂರು : ಕೋವಿಡ್ ಲಾಕ್​ ಡೌನ್​​ ಕಾರಣ ದಕ್ಷಿಣ ಕನ್ನಡ ಜಿಲ್ಲೆಯ ಜೀವನಾಡಿಗಳಾಗಿರುವ ಖಾಸಗಿ ಬಸ್​ಗಳ ಸಂಚಾರ ಸ್ಥಗಿತಗೊಂಡು ಎರಡು ತಿಂಗಳಾಯಿತು. ಇದರಿಂದ ಜನರು ಸಂಕಷ್ಟ ಅನುಭವಿಸಿದಲ್ಲದೆ, ಬಸ್​ ಚಾಲಕ, ಮಾಲಕರು ತೀವ್ರ ನಷ್ಟಕ್ಕೆ ಸಿಲುಕಿದ್ದಾರೆ. ಈ ನಡುವೆ ಬಸ್​ ಮಾಲಕರಿಗೆ ಹೊಸತೊಂದು ಸವಾಲು ಎದುರಾಗಿದೆ.

ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಬರುತ್ತಿದ್ದಂತೆ ಸುಮಾರು ಒಂದೂವರೆ ತಿಂಗಳಿನಿಂದ ಜಾರಿಯಲ್ಲಿದ್ದ ಲಾಕ್‌ಡೌನ್ ತೆರವುಗೊಳಿಸಲಾಗಿದೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಾರದ ಕಾರಣ ಜೂನ್ 21 ರವರೆಗೆ ಲಾಕ್​ ಡೌನ್​​ ವಿಸ್ತರಿಸಲಾಗಿದೆ. ಜೂನ್​ 21 ರ ಬಳಿಕ ಲಾಕ್​ ಡೌನ್​ ತೆರವುಗೊಂಡರೂ, ಖಾಸಗಿ ಬಸ್​ಗಳ ಓಡಾಟ ಪ್ರಾರಂಭಿಸಲು ಸಾಧ್ಯವಿಲ್ಲ.

ಸಂಕಷ್ಟಕ್ಕೆ ಸಿಲುಕಿದ ಕರಾವಳಿಯ ಖಾಸಗಿ ಬಸ್​ ಮಾಲಕರು

ಯಾಕೆಂದರೆ, ಸುದೀರ್ಘ ಸಮಯದಿಂದ ಬಸ್​ಗಳು ನಿಂತಲ್ಲೇ ನಿಂತಿರುವುದರಿಂದ ಅವುಗಳನ್ನು ಮತ್ತೆ ಓಡಾಟಕ್ಕೆ ಅನಿಗೊಳಿಸಬೇಕಾದರೆ ಕನಿಷ್ಠ ಅರ್ಧ ಲಕ್ಷದಷ್ಟು ಖರ್ಚು ಮಾಡಬೇಕು. ಬಸ್​​ಗಳು ಚಾಲನೆಯಿಲ್ಲದೆ ಅವುಗಳ ಟಯರ್​ಗಳ ರಬ್ಬರ್ ಸಾಮರ್ಥ್ಯ ಕಳೆದುಕೊಂಡಿದೆ. ನಿಂತಿರುವ ಕೆಲ ಬಸ್​ಗಳ ಟೈರ್ ಬಳಿ ಸಸಿಗಳು ಬೆಳೆದಿದೆ.

ಕೆಲವು ಬಸ್​ಗಳ ಬ್ಯಾಟರಿಗಳು ಹಾಳಾಗಿವೆ, ಇಂಜಿನ್ ಆಯಿಲ್ ಬದಲಾಯಿಸಬೇಕಿದೆ. ಬಸ್​ನಲ್ಲಿರುವ ಸೆನ್ಸಾರ್​ಗಳನ್ನು ರಿಬೂಟ್​ ಮಾಡಬೇಕಿದೆ. ಇನ್ನೂ ಕೆಲ ಕಡೆಗಳಲ್ಲಿ ನಿಂತಿದ್ದ ಬಸ್​ಗಳು ಬೆಂಕಿಗಾಹುತಿಯಾಗಿವೆ. ಇವೆಲ್ಲ ಸರಿಪಡಿಸಲು ಸುಮಾರು 50 ರಿಂದ 60 ಸಾವಿರ ರೂ. ಖರ್ಚು ಮಾಡಬೇಕು. ಮಂಗಳೂರು ನಗರ ಸಾರಿಗೆ ಸೇರಿದಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 2 ಸಾವಿರದಷ್ಟು ಬಸ್​ಗಳು ನಿಂತಲ್ಲೇ ನಿಂತಿವೆ. ಬಸ್​ಗಳು ಓಡಾಡದೆ, ತೀವ್ರ ಅರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬಸ್​ ಮಾಲೀಕರು, ಬಸ್​ ರಿಪೇರಿಗೆ ಎಲ್ಲಿಂದ ಹಣ ತರುವುದು ಎಂಬ ಚಿಂತೆಯಲ್ಲಿದ್ದಾರೆ.

ಕಳೆದ ಬಾರಿಯ ಲಾಕ್​ ಡೌನ್​ ಹೊಡೆತದಿಂದ ಕೊಂಚ ಚೇತರಿಸಿಕೊಳ್ಳುತ್ತಿದ್ದ ಸಂದರ್ಭ ಮತ್ತೊಮ್ಮೆ ಲಾಕ್​ ಡೌನ್​ ಜಾರಿಯಾದ್ದರಿಂದ ಬಸ್​ ಮಾಲೀಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ನಡುವೆ ಡೀಸೆಲ್ ಬೆಲೆ ಕೂಡ ಜಾಸ್ತಿಯಾಗಿದೆ. ಇದರೊಂದಿಗೆ ಈಗ ಬಸ್​ ರಿಪೇರಿ ಮಾಡಿಸಬೇಕು ಸಂದಿಗ್ಥತೆ ಎದುರಾಗಿದೆ. ಹಾಗಾಗಿ ಬಸ್​ ಮಾಲೀಕರು, ಚಾಲಕರಿಗೆ ದಿಕ್ಕೇ ತೋಚದಂತಾಗಿದೆ.

ಬಸ್ ಗಳು ರಸ್ತೆಗಿಳಿಯಬೇಕಾದರೆ ಅದು ಫಿಟ್ನೆಸ್ ಹೊಂದಿರಬೇಕಾಗುತ್ತದೆ. ಅನ್ ಲಾಕ್ ಆಯಿತೆಂದು ನೇರವಾಗಿ ಬಸ್​ಗಳನ್ನು ರಸ್ತೆಗಿಳಿಸುವಂತಿಲ್ಲ. ಇದರಿಂದ ಬಸ್​ ಮಾಲಕರಿಗೆ ಆ, ಬಸ್ ರಿಪೇರಿ ಮಾಡಿಸುವುದಾ, ಇಲ್ಲಾ ಬಸ್​ ಓಡಿಸುವುದಾ ಎಂಬ ಚಿಂತೆ ಶುರುವಾಗಿದೆ. ಫಿಟ್ನೆಸ್ ಇಲ್ಲದೆ ಬಸ್​ ಓಡಿಸಿದರೆ ಸಾರಿಗೆ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಬಸ್​ ಸೀಜ್ ಆಗಬಹುದು, ಇಲ್ಲವೇ ಅಪಾಯ ಎದುರಾಗಬಹುದು. ಇವೆಲ್ಲವನ್ನು ನಿರ್ವಹಿಸುವುದು ಬಸ್​ ಮಾಲಕರಿಗೆ ದೊಡ್ಡ ಸವಾಲಾಗಿದೆ.

ಇದನ್ನೂಓದಿ: ಆದೇಶ ಪಾಲಿಸದ ಮಂಗಳೂರು ಪಾಲಿಕೆ : ಸೂಪರ್ ಸೀಡ್ ಎಚ್ಚರಿಕೆ ನೀಡಿದ ಹೈಕೋರ್ಟ್

ABOUT THE AUTHOR

...view details