ಮಂಗಳೂರು:ಮೀನು ಸಾಗಾಟದ ಲಾರಿಗಳಿಂದ ತ್ಯಾಜ್ಯ ನೀರು ಹೊರ ಹಾಕಲು ಸೂಕ್ತ ಸ್ಥಳಾವಕಾಶ ಕಲ್ಪಿಸಬೇಕೆಂದು ಆಗ್ರಹಿಸಿ ಮಂಗಳೂರು ಮೀನು ಲಾರಿ ಚಾಲಕರ ಸಂಘ ಹಾಗೂ ಕಾರವಾರ ಕರಾವಳಿ ಕರ್ನಾಟಕ ಲಾರಿ ಚಾಲಕರ ಸಂಘ ಜಂಟಿಯಾಗಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಮೀನು ಸಾಗಾಟದ ಲಾರಿಗಳ ತ್ಯಾಜ್ಯ ನೀರು ಹೊರ ಹಾಕಲು ಸೂಕ್ತ ಸ್ಥಳಾವಕಾಶ ಕಲ್ಪಿಸುವಂತೆ ಆಗ್ರಹ
ಮೀನು ಸಾಗಾಟದ ಲಾರಿಗಳಿಂದ ತ್ಯಾಜ್ಯ ನೀರು ಹೊರ ಹಾಕಲು ಸೂಕ್ತ ಸ್ಥಳಾವಕಾಶ ಕಲ್ಪಿಸಬೇಕೆಂದು ಆಗ್ರಹಿಸಿ ಮಂಗಳೂರು ಮೀನು ಲಾರಿ ಚಾಲಕರ ಸಂಘ ಹಾಗೂ ಕಾರವಾರ ಕರಾವಳಿ ಕರ್ನಾಟಕ ಲಾರಿ ಚಾಲಕರ ಸಂಘ ಜಂಟಿಯಾಗಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ ಕರಾವಳಿಯ ಉತ್ತರ ಕನ್ನಡ, ಕಾರವಾರದಿಂದ ಆರಂಭವಾಗಿ ತಲಪಾಡಿವರೆಗೆ ಮೀನು ಲಾರಿಯ ತ್ಯಾಜ್ಯ ನೀರನ್ನು ಹೊರಸೂಸಲು ಯಾವುದೇ ವ್ಯವಸ್ಥೆ ಇಲ್ಲ. ಹಿಂದೆ ಕೇರಳದಲ್ಲಿಯೂ ಇದೇ ರೀತಿಯ ಸಮಸ್ಯೆಯಿತ್ತು. ಆದರೆ ಲಾರಿ ಚಾಲಕರು, ಮಾಲೀಕರ ಸಂಘವು ಮೀನಿನ ತ್ಯಾಜ್ಯ ನೀರನ್ನು ಹೊರಹಾಕಲು ಸೂಕ್ತ ವ್ಯವಸ್ಥೆ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿತು. ಪರಿಣಾಮ ಸರ್ಕಾರ ಸೂಕ್ತ ವ್ಯವಸ್ಥೆ ಕಲ್ಪಿಸಿದ ಬಳಿಕ ಇಂದು ಅಲ್ಲಿ ಯಾವುದೇ ಸಮಸ್ಯೆ ಇಲ್ಲ.
ಆದರೆ ಇಂದು ಕರ್ನಾಟಕದ ಕರಾವಳಿಯಲ್ಲಿ ಇದೇ ರೀತಿಯ ಪರಿಸ್ಥಿತಿ ಉದ್ಭವಿಸಿದೆ. ಲಾರಿ ಚಾಲಕರು ಎಂದಿಗೂ ತಪ್ಪು ಮಾಡುವವರಲ್ಲ. ಅನಿವಾರ್ಯ ಸ್ಥಿತಿಯಲ್ಲಿ ಅವರು ಮೀನಿನ ತ್ಯಾಜ್ಯ ನೀರನ್ನು ರಸ್ತೆ ಬದಿಯಲ್ಲಿ ಸುರಿಯುತ್ತಾರೆ. ಹಿಂದೆ ಮೀನು ಸಾಗಾಟದ ಲಾರಿಯಲ್ಲಿ ತ್ಯಾಜ್ಯ ನೀರು ಸಂಗ್ರಹದ ಟ್ಯಾಂಕ್ ಇರಲಿಲ್ಲ. ಆ ನೀರು ರಸ್ತೆಗೆ ಸುರಿಯುತ್ತಿತ್ತು. ತ್ಯಾಜ್ಯ ನೀರು ರಸ್ತೆಗೆ ಬೀಳಬಾರದೆಂದು ಲಾರಿ ಚಾಲಕರು ಮಾಲೀಕರೊಂದಿಗೆ ಮಾತನಾಡಿ ಪ್ರತೀ ಲಾರಿಗೆ 400 ಲೀಟರ್ನ ಟ್ಯಾಂಕ್ ಅಳವಡಿಸಲಾಯಿತು. ಆದರೆ ಟ್ಯಾಂಕ್ ಸ್ವಾಭಾವಿಕವಾಗಿ ತುಂಬಿದರೆ ಅದನ್ನು ಹೊರಸೂಸಲೇ ಬೇಕಾಗುತ್ತದೆ. ಡ್ರೈನೇಜ್ಗೂ ನೀರು ಬಿಟ್ಟರೂ ಶುಚಿತ್ವದ ಕಾರಣ ನೀಡಿ ಪೊಲೀಸರು ದೂರು ನೀಡುತ್ತಾರೆ. ಗುಂಪುಗಟ್ಟಿ ಲಾರಿಚಾಲಕರ ಮೇಲೆ ಹಲ್ಲೆ ಮಾಡುತ್ತಾರೆ, ಲಾರಿ ತಡೆಯುತ್ತಾರೆ. ಮಾಲೀಕರಿಗೆ ಈ ಬಗ್ಗೆ ತಿಳಿಸಿದರೂ, ಇದುವರೆಗೆ ಯಾವುದೇ ವ್ಯವಸ್ಥೆ ಆಗಿಲ್ಲ. ಅಲ್ಲದೆ ಕರಾವಳಿಯ ಸಂಸದರು, ಶಾಸಕರು, ಸಚಿವರು ಹಾಗೂ ಜಿಲ್ಲಾಡಳಿತ ಈ ಬಗ್ಗೆ ಸರಿಯಾದ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.