ಕರ್ನಾಟಕ

karnataka

ETV Bharat / state

ಮಂಗಳೂರು: ಕಾಮಗಾರಿ ಬಿಲ್ ರಿಪೋರ್ಟ್ ನೀಡಲು 20 ಸಾವಿರ ಲಂಚಕ್ಕೆ ಬೇಡಿಕೆ: ಕಿರಿಯ ಇಂಜಿನಿಯರ್ ಲೋಕಾಯುಕ್ತ ಬಲೆಗೆ - ​ ETV Bharat Karnataka

ಮಂಗಳೂರು ಬೊಂದೆಲ್‌ನಲ್ಲಿ ಕಿರಿಯ ಇಂಜಿನಿಯರ್-2 ಒಬ್ಬರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಕಿರಿಯ ಇಂಜಿನಿಯರ್ ಲೋಕಾಯುಕ್ತ ಬಲೆಗೆ
ಕಿರಿಯ ಇಂಜಿನಿಯರ್ ಲೋಕಾಯುಕ್ತ ಬಲೆಗೆ

By ETV Bharat Karnataka Team

Published : Oct 18, 2023, 3:48 PM IST

ಮಂಗಳೂರು (ದಕ್ಷಿಣ ಕನ್ನಡ) : ರಸ್ತೆ ಕಾಮಗಾರಿಯೊಂದರ ಬಿಲ್ ಮಂಜೂರು ಮಾಡಲು ಅಗತ್ಯ ಇರುವ ಸೈಟ್‌ನ ಮೆಟೀರಿಯಲ್ ಪರಿಶೀಲನೆ ಮಾಡಿ ನೀಡಬೇಕಾದ ವರದಿಗೆ 20 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಕಿರಿಯ ಇಂಜಿನಿಯರ್ ಒಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ನಗರದ ಬೊಂದೆಲ್‌ನಲ್ಲಿರುವ ಲೋಕೋಪಯೋಗಿ ಇಲಾಖೆಯ ಗುಣ ಮತ್ತು ಭರವಸೆ ವಿಭಾಗದ ಕಿರಿಯ ಇಂಜಿನಿಯರ್-2 ರೊನಾಲ್ಡ್ ಲೋಬೋ ಎಂಬುವರು ಬಂಧಿತ ಅಧಿಕಾರಿ ಎಂದು ತಿಳಿದು ಬಂದಿದೆ.

ಪ್ರಕರಣದ ಹಿನ್ನೆಲೆ:ದೂರುದಾರರಾದ ಪ್ರಭಾಕರ ನಾಯ್ಕ ಅವರು ಲೋಕೋಪಯೋಗಿ ಇಲಾಖೆಯಲ್ಲಿ ಕ್ಲಾಸ್-2 ದರ್ಜೆಯ ಗುತ್ತಿಗೆದಾರನಾಗಿದ್ದಾರೆ. ಇವರು ಬೆಳ್ತಂಗಡಿ ತಾಲೂಕು ನಿಡ್ಲೆ ಗ್ರಾಮದ ಮಲಂಪಯ್ಯ ಪರಿಶಿಷ್ಟ ಪಂಗಡದ ಕಾಲೋನಿಯ ಎಎನ್​ಎಂ ರಸ್ತೆ ಕಾಮಗಾರಿ 25 ಲಕ್ಷ ರೂ. ಮೊತ್ತ ಹಾಗೂ ಬೆಳ್ತಂಗಡಿ ತಾಲೂಕು ಕರಿಮಣೇಲು ಗ್ರಾಮದ ಕೈರೋಳಿ ಎಂಬಲ್ಲಿ 20 ಲಕ್ಷ ರೂ. ಮೊತ್ತದ ಟೆಂಡರ್ ಪ್ರಕ್ರಿಯೆಯಲ್ಲಿ ಬಿಡ್​​ ಸಲ್ಲಿಸಿ ಆಯ್ಕೆಯಾಗಿದ್ದರು. ಬಳಿಕ ಕಾಮಗಾರಿ ಪೂರ್ಣಗೊಳಿಸಿದ್ದರು.

ಕಾಮಗಾರಿ ಮುಗಿದ ಬಳಿಕ ಸೈಟ್‌ನ ಮೆಟೀರಿಯಲ್ ಪರಿಶೀಲನೆ ಮಾಡಿ ವರದಿ ನೀಡಲು ಮಂಗಳೂರು ಲೋಕೋಪಯೋಗಿ ಇಲಾಖೆಯ ಗುಣ ಮತ್ತು ಭರವಸೆ ವಿಭಾಗಕ್ಕೆ ಕಡತ ಬಂದಿತ್ತು. ದೂರುದಾರರು ಅಕ್ಟೋಬರ್ 11 ರಂದು ಈ ವಿಭಾಗಕ್ಕೆ ಹೋಗಿ ಅಲ್ಲಿನ ಕಿರಿಯ ಇಂಜಿನಿಯರ್-2 ಅವರಲ್ಲಿ ಮಾತನಾಡಿದಾಗ ಅವರು ಫೈಲ್ ಬಂದಿರುವುದಾಗಿ ತಿಳಿಸಿದ್ದು, ಅಮೌಂಟ್ ಕೊಟ್ಟು ಹೋಗಿ ಎಂದು ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ದೂರುದಾರರು ಆರೋಪಿಸಿ, ಲೋಕಾಯುಕ್ತರಿಗೆ ಕಂಪ್ಲೇಂಟ್​ ಮಾಡಿದ್ದರು.

ದೂರುದಾರರಿಗೆ ಲಂಚದ ಹಣ ಕೊಟ್ಟು ಕೆಲಸ ಮಾಡಲು ಇಷ್ಟ ಇಲ್ಲದೇ ಇದ್ದುದ್ದರಿಂದ ವಾಪಸ್​ ಬಂದಿದ್ದರು. ಮತ್ತೆ ಅಕ್ಟೋಬರ್ 16 ರಂದು ಮತ್ತೊಮ್ಮೆ ಕಿರಿಯ ಇಂಜಿನಿಯರ್​ ಜತೆ ಮಾತನಾಡಿದ್ದು, ಕಡತದಲ್ಲಿ ನಮೂದಿಸಿದಂತೆ ಮೆಟೀರಿಯಲ್ ಪರಿಶೀಲನೆ ಮಾಡಿ ವರದಿ ನೀಡಲು 22,000 ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಸ್ವಲ್ಪ ಕಡಿಮೆ ಮಾಡಿ ಎಂದು ಹೇಳಿದಾಗ 20,000 ರೂ. ಕೊಡಿ ಎಂದು ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ ಬುಧವಾರ ಕಿರಿಯ ಎಂಜಿನಿಯರ್​​ ದೂರುದಾರರಿಂದ 20,000 ರೂ. ಲಂಚ ಸ್ವೀಕರಿಸುವಾಗ ಸ್ಥಳದಲ್ಲಿಯೇ ಲೋಕಾಯುಕ್ತ ಅಧಿಕಾರಿಗಳಿಗೆ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ. ಬಂಧಿತ ಆರೋಪಿಯಿಂದ ಹಣ ವಶಕ್ಕೆ ಪಡೆಯಲಾಗಿದೆ.

ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸಿ.ಎ. ಸೈಮನ್ ಅವರ ಮಾರ್ಗದರ್ಶನದಲ್ಲಿ, ಮಂಗಳೂರು ಲೋಕಾಯುಕ್ತ ಪೊಲೀಸ್‌ ಠಾಣೆಯ ಪೊಲೀಸ್‌ ಉಪಾಧೀಕ್ಷಕರುಗಳಾದ ಕಲಾವತಿ.ಕೆ, ಚಲುವರಾಜು, ಬಿ, ಹಾಗೂ ಪೊಲೀಸ್‌ ನಿರೀಕ್ಷಕರಾದ ಅಮಾನುಲ್ಲಾ.ಎ, ಸುರೇಶ್ ಕುಮಾರ್.ಪಿ ಇವರು ಸಿಬ್ಬಂದಿ ಜೊತೆ ಟ್ರಾಪ್ ಕಾರ್ಯಾಚರಣೆ ಕೈಗೊಂಡಿದ್ದರು.

ಇದನ್ನೂ ಓದಿ :ಮದ್ಯದಂಗಡಿ ಪರವಾನಿಗೆ ನೀಡಲು ಲಂಚದ ಬೇಡಿಕೆ: ನಾಲ್ವರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ

ABOUT THE AUTHOR

...view details