ಮಂಗಳೂರು: ಲಾಕ್‌ಡೌನ್ ಪರಿಣಾಮ ಗೋಶಾಲೆಗಳು ತೀವ್ರ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದು, ಸೂಕ್ತ ಪರಿಹಾರ ಒದಗಿಸುವಂತೆ ಕರ್ನಾಟಕ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯ ವಿನಯ ಎಲ್. ಶೆಟ್ಟಿ ಸಿಎಂ ಯಡಿಯೂರಪ್ಪಗೆ ಮನವಿ ಮಾಡಿದ್ದಾರೆ.
ಗೋವುಗಳಿಗೆ ಮೇವು ಒದಗಿಸುವಂತೆ ಸಿಎಂಗೆ ಪತ್ರ ಅಕ್ರಮ ಗೋಸಾಗಾಟ ನಡೆದ ಸಂದರ್ಭದಲ್ಲಿ ಪೊಲೀಸರು ವಶಪಡಿಸಿದ ಗೋವುಗಳನ್ನು ಸರ್ಕಾರದ ಪರವಾಗಿ ಸಾಕುವಂತೆ ಗೋಶಾಲೆಗಳಿಗೆ ಹಸ್ತಾಂತರಿಸಲಾಗಿದೆ. ಅಂತಹ ಗೋವುಗಳ ಸಂಪೂರ್ಣ ಜವಾಬ್ದಾರಿ ರಾಜ್ಯ ಸರ್ಕಾರದ್ದೆಂದು ಸುಪ್ರೀಂಕೋರ್ಟ್ ಕ್ರಿಮಿನಲ್ ಅಪೀಲ್ ನಂ. 283-287/2002 ಇದರಲ್ಲಿ ಆದೇಶ ನೀಡಿದೆ. ಆದರೂ ಸರ್ಕಾರ ಇಂತಹ ಗೋಶಾಲೆಗಳಿಗೆ ಇದುವರೆಗೂ ಆರ್ಥಿಕ ನೆರವು ನೀಡಿಲ್ಲ. ಗೋ ಶಾಲೆಯಲ್ಲಿ 500-1000ಕ್ಕೂ ಹೆಚ್ಚಿನ ಗೋವುಗಳಿದ್ದರೂ ಗರಿಷ್ಠ 200 ಗೋವುಗಳಿಗೆ ದಿನವೊಂದಕ್ಕೆ ಒಂದು ಗೋವಿಗೆ ಕೇವಲ 17.50 ರೂ. ಅನುದಾನ ಕೊಡಲಾಗುತ್ತಿದೆ. ಉಳಿದ ಹಣವನ್ನು ಗೋಶಾಲೆಯವರು ಸಾರ್ವಜನಿಕರಿಂದ ದೇಣಿಗೆ ಪಡೆದು ಗೋವುಗಳ ಪಾಲನೆ ಮಾಡುತ್ತ ಬಂದಿದ್ದಾರೆ ಎಂದಿದ್ದಾರೆ. ಆದರೆ ಇದೀಗ ಲಾಕ್‌ಡೌನ್ ಇರುವುದರಿಂದ ಸಾರ್ವಜನಿಕ ದೇಣಿಗೆಯೂ ಸಂಪೂರ್ಣ ನಿಂತು ಹೋಗಿದೆ. ಪರಿಣಾಮ ಮೇವು ಕೊಳ್ಳಲು ಹಣವಿಲ್ಲದೆ ಗೋಶಾಲೆಗಳು ಕಂಗಾಲಾಗಿವೆ. ಆದ್ದರಿಂದ ದೊಡ್ಡ ಜಾನುವಾರುಗಳಿಗೆ ದಿನವೊಂದಕ್ಕೆ 300 ರೂ. ಹಾಗೂ ಕರುಗಳಿಗೆ 100 ರೂ.ನಂತೆ ಅನುದಾನ ನೀಡಬೇಕು. ಅಲ್ಲದೆ ರಾಜ್ಯದ ರೈತರ ಜಾನುವಾರುಗಳಿಗೂ ಮೇವು ಕೊರತೆ ಉಂಟಾಗಿದ್ದು, ಇವುಗಳಿಗೂ ತಕ್ಷಣ ಲಾಕ್‌ಡೌನ್ ವಿಶೇಷ ಅನುದಾನ ನೀಡಬೇಕಾಗಿ ವಿನಯ ಎಲ್. ಶೆಟ್ಟಿ ವಿನಂತಿಸಿದ್ದಾರೆ.