ಕರ್ನಾಟಕ

karnataka

ETV Bharat / state

ಇಲ್ನೋಡಿ ಮುಖ್ಯಮಂತ್ರಿಗಳೇ, ನಿಮ್ದೇ ಶಿಕಾರಿಪುರದ 16 ಜನ ತಲಪಾಡಿಯಲ್ಲಿ ಅತಂತ್ರರಾಗಿದ್ದಾರೆ.. - ಗರ್ಭಿಣಿ ಮಹಿಳೆ ಪರದಾಟ

ಸಿಎಂ ಪುತ್ರ ಬಿ ವೈ ರಾಘವೇಂದ್ರ ಅವರನ್ನು ಕುಟುಂಬಸ್ಥರು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಮೇ.3ರವರೆಗೆ ಕಾಯಿರಿ.ಆ ನಂತರ ಕರೆದೊಯ್ಯುವ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದ್ದಾರಂತೆ.

women
ಮಹಿಳೆ

By

Published : Apr 29, 2020, 6:27 PM IST

ಉಳ್ಳಾಲ :ಮುಖ್ಯಮಂತ್ರಿ ಯಡಿಯೂರಪ್ಪ ಅವರ ತವರೂರು ಹಾಗೂ ಅವರೇ ಶಾಸಕರಾಗಿರುವ ಶಿಕಾರಿಪುರದ ಒಂದೇ ಕುಟುಂಬದ 7 ಮಂದಿ ಸೇರಿ ಒಟ್ಟು 16 ಮಂದಿ ಕೂಲಿ ಕಾರ್ಮಿಕರು ಗಡಿಭಾಗ ತಲಪಾಡಿಯಲ್ಲಿ 30 ದಿನಗಳಿಂದ ಸಿಲುಕಿಕೊಂಡಿದ್ದಾರೆ. ಪ್ರಮುಖವಾಗಿ ಈ ಪೈಕಿ ಗರ್ಭಿಣಿಯೂ ಇದ್ದು, ದಿನಕ್ಕೆ ಮೂರು ಹೊತ್ತು ಊಟ ಸಿಗದೇ ಪರದಾಡುತ್ತಿದ್ದಾರೆ.

ಶಿಕಾರಿಪುರ ನಿವಾಸಿ ಮುರಳೀಧರ್ ನಾಯ್ಕ್‌, ಅವರ ಪತ್ನಿ ಹಾಗೂ ಮೂವರು ಹೆಣ್ಮಕ್ಕಳು. ಈ ಪೈಕಿ ಓರ್ವ ಗರ್ಭಿಣಿ ಪುತ್ರಿ ಕಲಾವತಿ, ಪತಿ ಸಂಜೀವ್, ಮಗು ಸೇರಿ 10 ಮಂದಿ ಕಾರ್ಮಿಕರು ತಲಪಾಡಿಯ ಮರಿಯಾಶ್ರಮ ಶಾಲೆಯಲ್ಲಿ ಸದ್ಯ ಉಳಿದುಕೊಂಡಿದ್ದಾರೆ.

ಸಂಕಷ್ಟದಲ್ಲಿ ಸಿಲುಕಿರುವ ಕುಟುಂಬ..

ಮಂಜೇಶ್ವರ ಭಾಗದಲ್ಲಿ ಕೂಲಿ ಕೆಲಸ ನಿರ್ವಹಿಸುತ್ತಿರುವ ಕುಟುಂಬ ದೇಶಾದ್ಯಂತ ಲಾಕ್‍ಡೌನ್ ಘೋಷಣೆಯಾದ ತಕ್ಷಣ ಊರು ಸೇರಬೇಕೆಂಬ ತವಕದಲ್ಲಿ ನಡೆದುಕೊಂಡೇ ಕರ್ನಾಟಕ ಗಡಿ ಪ್ರವೇಶಿಸಿದ್ದರು. ಆದರೆ, ಅವರನ್ನು ತಡೆದ ಕರ್ನಾಟಕ ಪೊಲೀಸರು ಮುಂದೆ ಹೋಗದಂತೆ ಬಿಡದೇ ಇದ್ದಾಗ, ದಿಕ್ಕು ಕಾಣದೇ ಇಡೀ ತಂಡಕ್ಕೆ ತಲಪಾಡಿ ಗಡಿಭಾಗದಲ್ಲಿರುವ ಮರಿಯಾಶ್ರಮ ಶಾಲೆ ನೆರವಾಗಿತ್ತು. ದು:ಖದ ಸಂಗತಿಯೆಂದರೆ ದೂರದ 20 ಕಿ.ಮೀ ಉದ್ದಕ್ಕೂ ಸುಡುಬಿಸಿಲಿನಲ್ಲಿ ಗರ್ಭಿಣಿ ಮಹಿಳೆಯೂ ಮಗುವನ್ನೆತ್ತಿಕೊಂಡು ನಡೆದುಕೊಂಡೇ ಕರ್ನಾಟಕ ತಲುಪಿದ್ದರು.

ಸ್ಥಳೀಯರಿಂದ ಊಟ :ಶಾಲೆಯಲ್ಲಿ ನೆಲೆಸಿರುವ ಕುಟುಂಬದ ಪೈಕಿ ಹೆಣ್ಮಕ್ಕಳಿದ್ದು, ಗರ್ಭಿಣಿಯೂ ಇದ್ದಾರೆ. ಮೂಲಸೌಕರ್ಯಗಳಿದ್ದರೂ ಮಹಿಳೆಯರಾಗಿರುವುದರಿಂದ ಬಹಳಷ್ಟು ತೊಂದರೆಯಾಗುತ್ತಿದೆ. ಸ್ಥಳೀಯರು ಮೂರು ಹೊತ್ತಿನ ಊಟಕ್ಕೆ ಸಹಕರಿಸುತ್ತಿದ್ದಾರೆ. ಆದರೆ, ಈ ಭಾಗದ ಊಟ ಸೇವನೆ ಕಷ್ಟವಾಗುತ್ತಿರುವುದರಿಂದ ಅವರಿಗೆ ದಿಕ್ಕು ತೋಚದಂತಾಗಿದ್ದಾರೆ.

ಕಣ್ಣೀರಿಟ್ಟ ಗರ್ಭಿಣಿಯಿಂದ ಆತ್ಮಹತ್ಯೆ ನಿರ್ಧಾರ :ಊರಲ್ಲಿ ಕೆಲಸವಿಲ್ಲ. ಕೃಷಿಗಾಗಿ ಬಹಳಷ್ಟು ಸಾಲ ಮಾಡಿದ್ದೇವೆ. ಮದುವೆ ಪ್ರಾಯದ ಇಬ್ಬರು ಸಹೋದರಿಯರಿದ್ದಾರೆ. ಹೆತ್ತವರ ಆರೋಗ್ಯ ಸರಿಯಾಗಿಲ್ಲ. ನಾನು ಗರ್ಭಿಣಿಯಾಗಿದ್ದೇನೆ. ಕೈಯಲ್ಲಿ ಕಾಸಿಲ್ಲ, ಊಟಕ್ಕೆ ಗತಿಯಿಲ್ಲ. ಒಂದೊತ್ತಿನ ಊಟವನ್ನು ಕಷ್ಟಪಟ್ಟು ಮಾಡುತ್ತಿದ್ದೇವೆ. ಆರೋಗ್ಯದ ಪರೀಕ್ಷೆ ನಡೆಸದೆ ದಿನಗಳೇ ಕಳೆದಿದೆ. ಮಾನಸಿಕವಾಗಿ ತುಂಬಾ ನೊಂದಿದ್ದೇವೆ. ಮಖ್ಯಮಂತ್ರಿಗಳು ದಯವಿಟ್ಟು ನಮ್ಮನ್ನು ನಮ್ಮ ಊರಿಗೆ ತಲುಪಿಸುವ ಕಾರ್ಯ ಮಾಡಿ ನಮಗೆ ಪರಿಹಾರ ನೀಡಿ ಎಂದು ಮಹಿಳೆ ಕಣ್ಣೀರಿಟ್ಟಿದ್ದಾಳೆ. ಅಲ್ಲದೇ ಇಂದು ಸಂಜೆಯೊಳಗೆ ನಮ್ಮನ್ನು ಊರು ತಲುಪಿಸುವ ಕಾರ್ಯ ಮಾಡದೇ ಇದ್ದಲ್ಲಿ ಎಲ್ಲರೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆಂದು ಎಚ್ಚರಿಕೆ ನೀಡಿದ್ದಾರೆ.

ಸಿಎಂ ಪುತ್ರ ಬಿ ವೈ ರಾಘವೇಂದ್ರ ಅವರನ್ನು ಕುಟುಂಬಸ್ಥರು ದೂರವಾಣಿ ಮೂಲಕ ಸಂಪರ್ಕಿಸಿದಾಗ ಮೇ.3ರವರೆಗೆ ಕಾಯಿರಿ. ಆನಂತರ ಕರೆದೊಯ್ಯುವ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿರುವುದಾಗಿ ಗರ್ಭಿಣಿ ಪತಿ ಸಂಜೀವ ತಿಳಿಸಿದರು. ಆದರೆ, 30 ದಿನಗಳಿಂದ ಶಾಲೆಯಲ್ಲಿ ಉಳಿದುಕೊಂಡಿದ್ದೇವೆ. ಅಧಿಕಾರಿಗಳನ್ನು ಸ್ಥಳೀಯರ ಸಹಕಾರದ ಜತೆಗೆ ಬಹಳಷ್ಟು ಸಂಪರ್ಕಿಸಿದ್ದೇವೆ. ಆದರೆ, ಯಾವುದೇ ರೀತಿಯ ಸ್ಪಂದನೆ ಸಿಗದಿರುವುದು ನೋವುಂಟು ಮಾಡಿದೆ. ಮೇ.3 ರವರೆಗೆ ಕಾಯುವುದು ತುಂಬಾ ಕಷ್ಟ ಎಂದಿದ್ದಾರೆ.

ಕಾರ್ಮಿಕರ ಕಷ್ಟಗಳಿಗೆ ಸ್ಪಂದಿಸುತ್ತಿರುವ ಗಡಿನಾಡು ರಕ್ಷಣಾ ವೇದಿಕೆಯ ಸಿದ್ದೀಖ್ ತಲಪಾಡಿ ಆರೋಗ್ಯ ಅಧಿಕಾರಿ ವಿಲ್ಮಾ ಅವರನ್ನು ಸಂಪರ್ಕಿಸಿದಾಗ, ಮಂಗಳವಾರದವರೆಗೂ ಸ್ಪಂದಿಸುವ ಭರವಸೆ ನೀಡಿದ್ದರು. ಆದರೆ, ನಿನ್ನೆಯಿಂದ ಅವರೂ ಫೋನ್ ಸ್ವೀಕರಿಸುತ್ತಿಲ್ಲ. ತಹಶೀಲ್ದಾರ್ ಕೂಡಾ ಕರೆ ಸ್ವೀಕರಿಸುತ್ತಿಲ್ಲ. ಇಲ್ಲಿ ಗರ್ಭಿಣಿಗೆ ಊಟಕ್ಕಿಲ್ಲದೆ ಕಷ್ಟಪಡುತ್ತಿದ್ದಾರೆ. ಜಿಲ್ಲಾಡಳಿತ ಸಂಪೂರ್ಣ ನಿರ್ಲಕ್ಷ್ಯವಹಿಸುತ್ತಿದೆ. ನಮ್ಮ ಗ್ರಾಮದಲ್ಲಿ ಇವರಿಗೇನಾದರೂ ಹೆಚ್ಚುಕಮ್ಮಿ ಆದಲ್ಲಿ ಜಿಲ್ಲಾಡಳಿತವೇ ನೇರ ಹೊಣೆಯಾಗಲಿದೆ ಎಂದು ಹೇಳಿದ್ದಾರೆ.

ABOUT THE AUTHOR

...view details