ಪುತ್ತೂರು (ದಕ್ಷಿಣ ಕನ್ನಡ): ಸ್ಥಳೀಯವಾಗಿ ಕ್ರಿಕೆಟ್ ಆಡುತ್ತಿದ್ದ ಎರಡು ತಂಡಗಳ ನಡುವೆ ಮೈದಾನದಲ್ಲಿ ಆರಂಭವಾದ ಮಾತಿನ ಚಕಮಕಿ ತಾರಕಕ್ಕೇರಿ, ರಾತ್ರಿ ಸಮೀಪದ ಅಂಗಡಿಯೊಂದರ ಬಳಿ ಹೊಡೆದಾಟಕ್ಕೆ ತಿರುಗಿ ವ್ಯಕ್ತಿಯೊಬ್ಬರು ಕೋಳಿ ಬಾಳುವಿನಿಂದ (ಚಾಕು) ಇರಿತಕ್ಕೆ ಒಳಗಾಗಿ ಗಂಭೀರ ಗಾಯಗೊಂಡ ಘಟನೆ ಸೋಮವಾರ ರಾತ್ರಿ ನಡೆದಿದೆ.
ಇದೇ ಘಟನೆಗೆ ಸಂಬಂಧಿಸಿದಂತೆ ಇತ್ತಂಡಗಳ ಇತರ ಒಟ್ಟು ಐವರು ಪುತ್ತೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಬಲ್ನಾಡುವಿನ ಸಮೀಪ ಸುಲ್ತಾನ್ ಸ್ಟೋರ್ ಬಳಿ ಪ್ರಕರಣ ನಡೆದಿದೆ. ಬಲ್ನಾಡು ಜನತಾ ಕಾಲೋನಿ ನಿವಾಸಿ ಸವಾದ್ ಅವರು ಕೋಳಿ ಬಾಳ್ನಿಂದ ಇರಿತಕ್ಕೆ ಒಳಗಾಗಿ ಮಂಗಳೂರಿನ ಇಂಡಿಯಾನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಮನ್ಸೂರ್ (23), ಮುಸ್ತಾಫ (22), ಅಬ್ಬಾಸ್ (31), ಸೈಯದ್ (21) ಎಂಬವವರು ಪುತ್ತೂರು ಧನ್ವಂತರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಬಲ್ನಾಡು ನಿವಾಸಿ ದಿನೇಶ್ (30) ಪುತ್ತೂರು ಆದರ್ಶ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಬಲ್ನಾಡು ಸಮೀಪ ಪ್ರತಿ ಭಾನುವಾರ ಲಾಕ್ಡೌನ್ ಲೆಕ್ಕಿಸದೆ ಕ್ರಿಕೆಟ್ ಆಡಲಾಗುತ್ತಿತ್ತು. ಜು.12ರ ಭಾನುವಾರದಂದು ಅಲ್ಲಿ ಒಂದು ಸಮುದಾಯಕ್ಕೆ ಸೇರಿದ ಯುವಕರು ಕ್ರಿಕೆಟ್ ಆಡುತಿದ್ದರು ಎನ್ನಲಾಗಿದೆ. ಸಂಜೆ ವೇಳೆ ಮತ್ತೊಂದು ಸಮುದಾಯಕ್ಕೆ ಸೇರಿದ ಯುವಕರ ತಂಡವೂ ಅಲ್ಲಿ ಕ್ರಿಕೆಟ್ ಆಡಲು ಬಂದಿದೆ. ಆಟದ ಮಧ್ಯೆ ಇತ್ತಂಡಗಳ ಯುವಕರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಮೈದಾನದಲ್ಲಿ ನಡೆಯುತ್ತಿದ್ದ ಚಕಮಕಿ ತಾರಕಕ್ಕೇರಿದ ಕಾರಣ ಜಗಳ ಸ್ಥಳೀಯ ನಿವಾಸಿಗಳ ಗಮನಕ್ಕೂ ಬಂದಿದೆ. ಸ್ವಲ್ಪ ಸಮಯದ ಬಳಿಕ ಗಲಾಟೆ ತಹಬದಿಗೆ ಬಂದು ಎರಡು ತಂಡದ ಸದಸ್ಯರು ಅಲ್ಲಿಂದ ತೆರಳಿದ್ದರು ಎಂದು ತಿಳಿದುಬಂದಿದೆ.
ಮರುದಿನ ಜು.13ರಂದು ರಾತ್ರಿ ವೇಳೆ ಈ ಎರಡೂ ತಂಡಗಳ ಕೆಲ ಆಟಗಾರರ ಮಧ್ಯೆ ಹಾಗೂ ಅವರ ಪರವಾಗಿ ಸೇರಿದ ಎರಡು ತಂಡದ ಕೆಲ ಯುವಕರ ನಡುವೆ ಅಲ್ಲಿನ ಸುಲ್ತಾನ್ ಸ್ಟೋರ್ ಸಮೀಪ ವಾಗ್ವಾದ ನಡೆದಿದೆ. ಅದು ತಾರಕಕ್ಕೇರಿ ಹೊಡೆದಾಟಕ್ಕೆ ತಿರುಗಿದೆ. ಈ ಸಂದರ್ಭ ಕೋಳಿ ಬಾಳ್ ಬಳಸಿ ಸವಾದ್ ಎಂಬಾತನನ್ನು ಗಂಭೀರವಾಗಿ ಗಾಯಗೊಳಿಸಲಾಗಿದೆ ಎನ್ನಲಾಗಿದೆ.