ಮಂಗಳೂರು :ಕೇಂದ್ರ ಸರ್ಕಾರವು ಮೀನುಗಾರರನ್ನು ಪ್ರೋತ್ಸಾಹಿಸಲು ಡಿಸಿಸಿ ಬ್ಯಾಂಕ್ ವತಿಯಿಂದ ಕಿಸಾನ್ ಕಾರ್ಡ್ ಹೊಂದಿದವರಿಗೆ 2- 3 ಲಕ್ಷ ರೂ. ಸಾಲ ನೀಡುತ್ತಿದೆ. ಈ ಯೋಜನೆಯ ಮೂಲಕ 10,000 ಜನರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ಗುರಿ ಇರಿಸಿಕೊಳ್ಳಲಾಗಿದೆ ಎಂದು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿಯಲ್ಲಿ ನಡೆದ ಪಂಜರ ಮೀನು ಕೃಷಿ ಕಾರ್ಯಾಗಾರ ಉದ್ಘಾಟಿಸಿ, ಇಲಾಖೆಯ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮೀನುಗಾರಿಕೆ ಇಲಾಖೆಯವರು ಒಟ್ಟುಗೂಡಿ ಒಂದು ತಂಡವಾಗಿ ಶ್ರಮಿಸಿದರೆ ಈ ಯೋಜನೆ ತಳಮಟ್ಟದ ಜನರಿಗೆ ತಲುಪಿ ಯಶಸ್ಸು ಕಾಣಲು ಸಾಧ್ಯ ಎಂದರು.
ರಾಜ್ಯ ಸರ್ಕಾರವು ಆತ್ಮನಿರ್ಭರ ಭಾರತ ಯೋಜನೆಯಡಿಯಲ್ಲಿ ಮೀನುಗಾರಿಕೆ ಇಲಾಖೆಯ ಮೂಲಕ ಸ್ವಯಂ ಉದ್ಯೋಗದಲ್ಲಿ ತೊಡಗಿಕೊಳ್ಳಲು ಯೋಜನೆ ರೂಪಿಸಿಕೊಂಡಿದೆ. ಈ ಯೋಜನೆಯ ಮೂಲಕ ತರಬೇತಿ ಪಡೆದುಕೊಂಡು ಪಂಜರ ಮೀನು ಕೃಷಿಯಲ್ಲಿ ಯಶಸ್ಸು ಕಾಣಬೇಕು. ಗುಜರಾತ್, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಒರಿಸ್ಸಾ ರಾಜ್ಯದಲ್ಲಿ ಮಾತ್ರ ಕಾಣಲು ಸಾಧ್ಯವಾಗಿತ್ತು. ಕರ್ನಾಟಕದಲ್ಲಿ ಈ ಯೋಜನೆ ಜಾರಿಗೊಳಿಸುವುದರ ಮೂಲಕ ಮೀನುಗಾರಿಕೆಯಲ್ಲಿ ಮಹತ್ವದ ಬದಲಾವಣೆ ತರಬಹುದು ಎಂದರು.
ಸರ್ಕಾರವು ಮಹಿಳಾ ಮೀನುಗಾರರಿಗೆ ಮತ್ಸ್ಯ ಮಹಿಳಾ ಸ್ವಾವಲಂಬನಾ ಯೋಜನೆ ಮುಖಾಂತರ ಸ್ವ-ಸಹಾಯ ಗುಂಪಿನಲ್ಲಿ ದುಡಿಯುವುದಕ್ಕೆ ಬಂಡವಾಳ ರೂಪದಲ್ಲಿ 2 ಲಕ್ಷ ರೂ. ಹಾಗೂ ಸಹಕಾರಿ ಸಂಘದ ಸದಸ್ಯ ಗುಂಪುಗಳಿಗೆ 50,000 ರೂ. ನೆರವು ನೀಡಲಿದೆ. ಮೀನುಗಾರರು ಸಮುದ್ರಕ್ಕೆ ಇಳಿಯುವ ಮುನ್ನ ಲೈಫ್ ಜಾಕೇಟ್ ಧರಿಸಬೇಕು ಮತ್ತು ಮುಂದಿನ ದಿನದಲ್ಲಿ ಮೀನುಗಾರರಿಗೆ ಹೆಚ್ಚಿನ ಸೌಲಭ್ಯಗಳನ್ನು ಸರ್ಕಾರದ ವತಿಯಿಂದ ನೀಡಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಗಾರದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ವಿಧಾನ ಪರಿಷತ್ ಸದಸ್ಯ ಪ್ರತಾಪ್‍ಸಿಂಹ ನಾಯಕ್, ಶಾಸಕರಾದ ವೇದವ್ಯಾಸ್ ಕಾಮತ್, ಭರತ್ ಶೆಟ್ಟಿ, ಉಮಾನಾಥ್ ಕೋಟ್ಯಾನ್, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಮೀನುಗಾರಿಕೆ ನಿರ್ದೇಶಕ ರಾಮಾಚಾರ್ಯ, ಮೀನುಗಾರಿಕೆ ಇಲಾಖೆ ಹಾಗೂ ವಿವಿಧ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.