ಮಂಗಳೂರು: ದಾಖಲಾತಿ ಹೆಚ್ಚಿಸುವ ಸಲುವಾಗಿ ಹಾಗೂ ಮಕ್ಕಳನ್ನು ಆಕರ್ಷಿಸಲು ಎಲ್ಕೆಜಿ, ಯುಕೆಜಿಗಳನ್ನು ಸರಕಾರಿ ಶಾಲೆಗಳಲ್ಲಿ ಆರಂಭಿಸಲಾಗುತ್ತದೆ ಎಂದು ರಾಜ್ಯ ಶಿಕ್ಷಣ ಇಲಾಖೆ ಮೇ 17 ರಂದು ಆದೇಶ ಹೊರಡಿಸಿದೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್.ವರಲಕ್ಷ್ಮಿ ಹೇಳಿದರು.
ರಾಜ್ಯದಲ್ಲಿರುವ ಸುಮಾರು 62 ಸಾವಿರ ಅಂಗನವಾಡಿ ಕೇಂದ್ರಗಳು ಮುಚ್ಚುವ ಭೀತಿಯಲ್ಲಿದೆ. ಈ ಕಾರಣಕ್ಕಾಗಿ ಶಿಕ್ಷಣ ಇಲಾಖೆಯ ಈ ಆದೇಶದ ಪ್ರಕಾರ ಮೂರುವರೆ ವರ್ಷದ ಮಕ್ಕಳನ್ನು ಸರಕಾರದ ಶಾಲೆಗಳಲ್ಲಿ ದಾಖಲಾತಿ ಮಾಡುತ್ತೇವೆ. ಈ ಮಕ್ಕಳಿಗೆ ಎಲ್ಕೆಜಿ, ಯುಕೆಜಿ ಶಿಕ್ಷಣ ನೀಡಲು ಗೌರವಧನದ ಆಧಾರದ ಮೇಲೆ ಎಸ್ಡಿಎಂಸಿ ಕಮಿಟಿಯ ಮುಖಾಂತರ ವರ್ಷಕ್ಕೆ ಹತ್ತು ತಿಂಗಳ ಕರಾರಿನ ಮೇಲೆ ಒಬ್ಬ ಶಿಕ್ಷಕಿ ಹಾಗೂ ಓರ್ವ ಆಯಾರನ್ನು ನೇಮಿಸಲಾಗುತ್ತದೆ. ಅಂಗನವಾಡಿಯಲ್ಲಿ 3 ರಿಂದ 6 ವರ್ಷದ ಮಕ್ಕಳಿಗೆ ನೀಡುವ ಆಹಾರದಂತೆ ಒಂದು ಮಗುವಿಗೆ 9 ರೂ.ನಂತೆ ಖರ್ಚು ಮಾಡಲಾಗುತ್ತದೆ. ಅಲ್ಲದೆ ಆರೋಗ್ಯ ತಪಾಸಣೆ ಸಹಿತ ಅಂಗನವಾಡಿಯಲ್ಲಿ ಮಕ್ಕಳಗಾಗಿ ಏನು ಮಾಡಲಾಗುತ್ತದೆಯೋ, ಅದನ್ನೇ ಇಲ್ಲಿ ಮಾಡಲಾಗುತ್ತದೆ ಎಂದು ಆದೇಶ ಹೊರಡಿಸಲಾಗಿದೆ ಎಂದರು.
ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್.ವರಲಕ್ಷ್ಮಿ ಯವರಿಂದ ಮಾಹಿತಿ ಈಗಾಗಲೇ ಅಂಗವಾಡಿ ಕೇಂದ್ರಗಳಲ್ಲಿ ಈ ಎಲ್ಲಾ ವ್ಯವಸ್ಥೆಗಳಿದ್ದು, ಸರಕಾರ ಇದಕ್ಕೆ ಪರ್ಯಾಯವಾಗಿ ಈ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿದೆ. ಇದಕ್ಕೆ ನಾವು ವಿರೋಧ ವ್ಯಕ್ತಪಡಿಸಿದ್ದು, ಅಂಗನವಾಡಿ ಕೇಂದ್ರಗಳಲ್ಲೇ ಎಲ್ ಕೆಜಿ ಮತ್ತು ಯುಕೆಜಿಗಳನ್ನು ಪ್ರಾರಂಭ ಮಾಡಬೇಕು ಎಂದು ಅವರು ಹೇಳಿದರು.
ಸರಕಾರಿ ಶಾಲೆಗಳಲ್ಲಿ ದಾಖಲಾತಿ ಕಡಿಮೆಯಾಗಲು ಅಂಗನವಾಡಿ ಕಾರಣ ಅಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಉತ್ತೇಜನ ನೀಡಿದ್ದು, ಕಿಂಡರ್ ಗಾರ್ಡನ್, ಶಿಕ್ಷಣದ ಖಾಸಗೀಕರಣವೇ ಸರಕಾರಿ ಶಾಲೆಗಳ ದಾಖಲಾತಿ ಕೊರತೆಗೆ ಕಾರಣ. ಅಲ್ಲದೆ ಕೊಠಾರಿ ಆಯೋಗ 60 ರ ದಶಕದಲ್ಲೇ ಇದಕ್ಕೊಂದು ರೆಕಮಂಡೇಷನ್ನ್ನು ಹೊರಡಿಸಿದ್ದಾರೆ. ಅದರ ಪ್ರಕಾರ ನಮ್ಮ ಶಿಕ್ಷಣದಲ್ಲಿ ಸುಧಾರಣೆ ತರಬೇಕಾದರೆ ಒಟ್ಟು ಬಜೆಟ್ನಲ್ಲಿ 6 ಶೇಕಡಾ ಅನುದಾನವನ್ನು ಶಿಕ್ಷಣಕ್ಕಾಗಿ ವಿನಿಯೋಗಿಸಬೇಕು. ಅದೇ ರೀತಿ ವರ್ಷದಲ್ಲಿ ಮಂಡಿಸುವ ಒಟ್ಟು ಬಜೆಟ್ನಲ್ಲಿ ಶೇಕಡ 10ರಷ್ಟು ಶಿಕ್ಷಣಕ್ಕೆ ಮೀಸಿಲಿರಿಸಬೇಕು. ರಾಜ್ಯ ಸರಕಾರ ತಮ್ಮ ಒಟ್ಟು ಬಜೆಟ್ ನಲ್ಲಿ ಒಟ್ಟು 30% ಅನುದಾನವನ್ನು ಶಿಕ್ಷಣಕ್ಕೆ ಮೀಸಲಿರಿಸಬೇಕು.
ಮಕ್ಕಳಿಗೆ ಶಿಕ್ಷಣ ಕೊಡುವುದಕ್ಕೆ ನಮ್ಮ ವಿರೋಧ ಇಲ್ಲ. ಎಲ್ಲಿ ಕೊಡಬೇಕು ಎನ್ನುವುದೇ ನಮ್ಮ ಪ್ರಶ್ನೆ. ಅಂಗನವಾಡಿ ಕೇಂದ್ರದಲ್ಲಿ 3-6 ವರ್ಷದೊಳಗಿನ ಮಕ್ಕಳು ಬರುತ್ತಾರೆ. ಆದರೆ ಅದೇ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ತೆಗೆದುಕೊಂಡು ಹೋದರೆ, ಅಂಗನವಾಡಿ ಕೇಂದ್ರಗಳನ್ನು ಮುಚ್ಚಬೇಕಾಗುತ್ತದೆ. ಆದ್ದರಿಂದ ಸರಕಾರಿ ಶಾಲೆಗಳಲ್ಲಿ ಪ್ರಾರಂಭ ಮಾಡುವ ಎಲ್ಕೆಜಿ, ಯುಕೆಜಿಗಳನ್ನು ಅಂಗನವಾಡಿ ಕೇಂದ್ರಗಳಲ್ಲಿ ಆರಂಭಿಸಿ ಈ ಯೋಜನೆ ಜಾರಿಗೆ ಬಾರದಂತೆ ಹೋರಾಟ ಆರಂಭಿಸಿದ್ದೇವೆ. ಅಲ್ಲದೆ ಎಲ್ಲಾ ಸಂಘಟನೆಗಳು ಒಟ್ಟು ಸೇರಿ ಇದೇ ತಿಂಗಳ 30 ನೇ ತಾರೀಕಿನಂದು ವಿಧಾನಸೌಧ ಚಲೋ ಮಾಡುತ್ತಿದ್ದೇವೆ. ಅಲ್ಲದೆ ಈ ಮೂಲಕ ಜೂನ್ 1ರಿಂದ ಈ ಯೋಜನೆ ಆರಂಭಿಸದಂತೆ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಹೇಳಿದರು.
ಈ ಸಂದರ್ಭ ಸಿಐಟಿಯು ರಾಜ್ಯ ಸಮಿತಿಯ ಸದಸ್ಯ ಶಿವಕುಮಾರ್, ಸಿಐಟಿಯು ರಾಜ್ಯ ಸಮಿತಿಯ ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸಿಐಟಿಯು ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಉಪಸ್ಥಿತರಿದ್ದರು.