ಮಂಗಳೂರು/ಬೆಂಗಳೂರು:ಮಹಾಮಾರಿ ಕೋವಿಡ್-19 ಸೋಂಕು ವ್ಯಾಪಕವಾಗುತ್ತಾ ಹೋದಂತೆ ಲಾಕ್ಡೌನ್ ಜಾರಿ ಮಾಡಲಾಯ್ತು. ಸೋಂಕು ಪ್ರಕರಣಗಳೇನೋ ಕಡಿಮೆಯಾಗುತ್ತಾ ಬರುತ್ತಿವೆ. ಆದ್ರೆ ಲಾಕ್ಡೌನ್ ಹೊಡೆತಕ್ಕೆ ಹೆಚ್ಚಿನವರು ಸಿಲುಕಿದ್ದಾರೆ. ಮನೆಗೆಲಸಕ್ಕೆ ಹೋಗುವವರ ಪಾಡಂತೂ ಹೇಳತೀರದು.
ಬೆಂಗಳೂರು, ಮಂಗಳೂರಿನಂತಹ ಮಹಾನಗರಗಳೂ ಸೇರಿ ರಾಜ್ಯದ ಹಲವೆಡೆ ಮನೆಕೆಲಸ ನಂಬಿಯೇ ಜೀವನ ನಡೆಸುವವರು ಸಾಕಷ್ಟು ಮಂದಿ ಇದ್ದಾರೆ. ಉದ್ಯೋಗಕ್ಕೆ ತೆರಳುವವರು, ಶ್ರೀಮಂತರೂ ಸಹ ಇವರನ್ನೇ ಅವಲಂಬಿಸಿದ್ದಾರೆ. ಆದ್ರೆ ಸೋಂಕು ಭೀತಿ, ಲಾಕ್ಡೌನ್ನಿಂದ ಯಾರೂ ಏನೂ ಮಾಡಲಾಗದ ಪರಿಸ್ಥಿತಿ ಇದೆ.
ಮನೆಗೆಲಸಕ್ಕೆ ಹೋಗೋವ್ರ ಮೇಲೂ ಕೋವಿಡ್ ಎಫೆಕ್ಟ್ ಕೆಲಸ ಕೊಡುತ್ತಿದ್ದವರು ಕೊರೊನಾ ಕಡಿಮೆಯಾಗೋವರೆಗೂ ಬರಬೇಡಿ ಅಂತಾರೆ. ಬೇರೆ ಕೆಲಸವೂ ಸಿಗುತ್ತಿಲ್ಲ, ಇತ್ತ ಬಸ್ ಸಂಚಾರವೂ ಇಲ್ಲ. ದುಡಿಮೆಯಿಲ್ಲದಿದ್ದರೆ ಜೀವನ ನಡೆಸೋದಾದ್ರೂ ಹೇಗೆ ಅಂತಾರೆ ಮನೆಗೆಲಸಕ್ಕೆ ಹೋಗುವವರು.
ಈ ಬಗ್ಗೆ ಮನೆಗೆಲಸಕ್ಕೆ ಹೋಗುವ ಮಹಾದೇವಿ ಮತ್ತು ಹೊನ್ನಮ್ಮ ಮಾತನಾಡಿದ್ದು, ಕೊರೊನಾ ಕಾರಣದಿಂದಾಗಿ ಅಪಾರ್ಟ್ಮೆಂಟ್, ಮನೆಗಳ ಮಾಲೀಕರು ಮನೆಗೆಲಸ ಮಾಡಲು ಬರುವುದು ಬೇಡ ಎಂದು ಹೇಳಿದ್ದಾರೆ. ನಮ್ಮನ್ನು ವಾಪಸ್ ಕಳುಹಿಸಿದ್ದಾರೆ. ಇದರಿಂದ ಉದ್ಯೋಗ ಇಲ್ಲ, ಕೈಯಲ್ಲಿ ಕಾಸಿಲ್ಲ. ಜೀವನ ನಿರ್ವಹಣೆ ಬಹಳಾನೇ ಕಷ್ಟ ಆಗಿದೆ. ಸದ್ಯ ಬಸ್ ಸಂಚಾರವೂ ಇಲ್ಲ. ಬೇರೆ ಕೆಲಸ ಹುಡುಕುವುದಾದರು ಹೇಗೆ? ಎಂದು ಅಳಲು ತೋಡಿಕೊಂಡಿದ್ದಾರೆ.
ಸೋಂಕು ಸೃಷ್ಟಿಸಿರುವ ಅವಾಂತರ ಒಂದಾ ಎರಡಾ? ಹಾಗಾಗಿ ಸೋಂಕು ನಿಯಂತ್ರಣವೊಂದೇ ನಮಗಿರುವ ಮಾರ್ಗ. ಸರ್ಕಾರ ಕೈಗೊಂಡಿರುವ ಕ್ರಮಗಳಿಗೆ ಮತ್ತಷ್ಟು ಸಹಕಾರ ನೀಡಿ ಸೋಂಕಿಗೆ ಸಂಪೂರ್ಣ ಕಡಿವಾಣ ಹಾಕೋಣ. ಸಮಸ್ಯೆ ಬಗೆಹರಿಸೋಣ.