ಕರ್ನಾಟಕ

karnataka

ETV Bharat / state

ಕುಡಿದ ಮತ್ತಿನಲ್ಲಿ ಸ್ನೇಹಿತನ ಕೊಲೆ: ಆರೋಪಿಗೆ ಜೀವಾವಧಿ ಶಿಕ್ಷೆ

ಕುಡಿದ ಮತ್ತಿನಲ್ಲಿ ಸ್ನೇಹಿತನನ್ನು ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗೆ ದ.ಕ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ದ.ಕ ಜಿಲ್ಲೆ ಮೂಡುಬಿದಿರೆಯ ಶಿರ್ತಾಡಿ ದೇವಸಮನೆ ನಿವಾಸಿ ಜಯ ಮಡಿವಾಳ ಆತನ ಸ್ನೇಹಿತನನ್ನು ಕಡಿದು ಕೊಲೆ ಮಾಡಿದ್ದ.

ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ

By

Published : Aug 26, 2019, 11:29 PM IST

ಮಂಗಳೂರು: ಕುಡಿತದ ಮತ್ತಿನಲ್ಲಿ ಸ್ನೇಹಿತನನ್ನೇ ಕಡಿದು ಕೊಲೆಗೈದ ಆರೋಪಿಗೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಮೂಡುಬಿದಿರೆಯ ಶಿರ್ತಾಡಿ ದೇವಸಮನೆ ನಿವಾಸಿ ಜಯ ಮಡಿವಾಳ (42) ಶಿಕ್ಷೆಗೊಳಗಾದ ಆರೋಪಿ. ಜಯ ಮಡಿವಾಳ ಕಳೆದ ವರ್ಷ ಅಕ್ಟೋಬರ್ 2ರಂದು ರಾತ್ರಿ ತನ್ನ ಮನೆಯಲ್ಲಿಯೇ ಸ್ನೇಹಿತ, ಪಚ್ಚಾಡಿ ಕಜೆ ಶಿರ್ತಾಡಿ ನಿವಾಸಿ ಶೇಖರ ಪೂಜಾರಿ(52) ಎಂಬವರನ್ನು ಕಡಿದು ಕೊಲೆ ಮಾಡಿದ್ದ.

ಪ್ರಕರಣ ವಿವರ :ಜಯ ಮಡಿವಾಳ ದೇವಸಮನೆಯಲ್ಲಿ ಓಬ್ಬನೇ ವಾಸಿಸುತ್ತಿದ್ದ. ಕೊಲೆಯಾಗುವ ದಿನದಂದು ಮಧ್ಯಾಹ್ನ ಇಬ್ಬರೂ ಶಿರ್ತಾಡಿ ಪೇಟೆಯಲ್ಲಿ ಭೇಟಿಯಾಗಿದ್ದರು. ಈ ವೇಳೆ ಶೇಖರ ಪೂಜಾರಿ ಜಯ ಮಡಿವಾಳನಲ್ಲಿ ತನ್ನೊಂದಿಗೆ ಬರುವಂತೆ ಹೇಳಿದ್ದ. ಬಳಿಕ ಇಬ್ಬರೂ ಜಯ ಮಡಿವಾಳನ ಮನೆಗೆ ತೆರಳಿದ್ದರು. ರಾತ್ರಿ ಮದ್ಯ ಸೇವಿಸಿ, ಬಳಿಕ ಅಡುಗೆ ಮಾಡಿ ಊಟ ಮಾಡಿದ್ದರು. ಆ ಸಂದರ್ಭ ಜಯ ಮಡಿವಾಳ ಒಬ್ಬನೇ ಇರುವುದರಿಂದ ಆತನ ಜಮೀನನ್ನು ತನಗೆ ಕೊಡುವಂತೆ ಶೇಖರ್ ಕೇಳಿದ್ದ. ಇದರಿಂದ ಸಿಟ್ಟಿಗೆದ್ದ ಜಯಮಡಿವಾಳ ಶೇಖರ ಪೂಜಾರಿಯನ್ನು ಕೊಚ್ಚಿ ಕೊಲೆ ಮಾಡಿದ್ದ.

ಮರುದಿನ ಈ ಬಗ್ಗೆ ಪ್ರಕರಣ ದಾಖಲಿಸಿದ ಮೂಡುಬಿದಿರೆ ಪೊಲೀಸರು, ಆರೋಪಿಯನ್ನು ಬಂಧಿಸಿದ್ದರು. ಬಳಿಕ ಇನ್‌ಸ್ಪೆಕ್ಟರ್ ರಾಮಚಂದ್ರ ನಾಯಕ್ ನೇತೃತ್ವದಲ್ಲಿ ತನಿಖೆ ನಡೆಸಿ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ತನ್ನನ್ನು ಆಂಧ್ರಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡಲು ಶೇಖರ ಪೂಜಾರಿ ಹವಣಿಸುತ್ತಿದ್ದ. ಆದ್ದರಿಂದ ಕೊಲೆ ಮಾಡಿದ್ದಾಗಿ ಆರೋಪಿ ತನಿಖೆ ವೇಳೆ ಹೇಳಿದ್ದ. ಇದೀಗ ನೇರ ಸಾಕ್ಷಿಗಳಿಲ್ಲದಿದ್ದರೂ ಸಾಂದರ್ಭಿಕ ಸಾಕ್ಷಿಗಳ ಆಧಾರದಲ್ಲಿ ಆತ ಮಾಡಿದ ಅಪರಾಧ ಸಾಬೀತಾಗಿದ್ದು, ಜಿಲ್ಲಾ ಪ್ರಧಾನ ಮತ್ತು ನ್ಯಾಯಾಧೀಶ ಕಡ್ಲೂರು ಸತ್ಯನಾರಾಯಣ ಆಚಾರ್ಯ ಅಪರಾಧಿಗೆ ಕಠಿಣ ಜೀವಾವಧಿ ಶಿಕ್ಷೆ, 10 ಸಾವಿರ ರೂ. ದಂಡ ಮತ್ತು ದಂಡ ತೆರಲು ತಪ್ಪಿದರೆ ಆರು ತಿಂಗಳು ಸಜೆ ವಿಧಿಸಿ ಆದೇಶ ನೀಡಿದ್ದಾರೆ.

ಆರೋಪಿ ಸೆರೆಯಾದ ಬಳಿಕ ನ್ಯಾಯಾಂಗ ಬಂಧನದಲ್ಲೇ ಇದ್ದು, ಆತ ಜೈಲಿನಲ್ಲಿ ಕಳೆದ ಅವಧಿಯನ್ನು ಸಿಆರ್‌ಪಿಸಿ 428ರಂತೆ ವಿನಾಯಿತಿ ಪಡೆಯುವುದಕ್ಕೆ ಅವಕಾಶಗಳಿವೆ. ಅಲ್ಲದೆ, ಶೇಖರ ಪೂಜಾರಿ ಪತ್ನಿ, ಮಕ್ಕಳಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಪರಿಹಾರ ನೀಡುವುದಕ್ಕೆ ನ್ಯಾಯಾಲಯ ಶಿಫಾರಸು ಮಾಡಿದೆ. ಪ್ರಾರಂಭದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಪುಷ್ಪರಾಜ್ ಕೆ. ಆರೋಪಿ ಪರ ವಾದಿಸಿದ್ದು, ಬಳಿಕ ರಾಜು ಪೂಜಾರಿ ಬನ್ನಾಡಿ ವಾದಿಸಿದ್ದರು.

ABOUT THE AUTHOR

...view details