ಕರ್ನಾಟಕ

karnataka

ETV Bharat / state

’ಗೋಲಿಬಾರ್​ನಲ್ಲಿ‌ ಮಡಿದ ಜಲೀಲ್ ಮಗಳನ್ನು ಪೊಲೀಸ್ ಕಮಿಷನರ್ ಆಗಿಸೋ ಶಪಥ’

ಗೋಲಿಬಾರ್ ಪ್ರಕರಣದಲ್ಲಿ ಮಡಿದ ಜಲೀಲ್ ಮಗಳು ಮುಂದಿನ 20 ವರ್ಷಗಳ ಬಳಿಕ ಮಂಗಳೂರು ಪೊಲೀಸ್ ಕಮಿಷನರ್ ಆಗಬೇಕು. ಆಕೆಯನ್ನು ಎಲ್ಲರೂ ಸೇರಿ ಓದಿಸೋಣ. ಅವಳಲ್ಲಿ ಆಕ್ರೋಶವನ್ನು ಜೀವಂತವಾಗಿರಿಸೋಣ. ಇದು ಮಂಗಳೂರು ಗೋಲಿಬಾರ್ ಪ್ರಕರಣಕ್ಕೆ ಪ್ರತೀಕಾರವಾಗಲಿ. ಇದನ್ನು ಶಪಥವಾಗಿ ಸ್ವೀಕರಿಸೋಣ ಎಂದು ಮಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ಪತ್ರಕರ್ತ ರಾ.ಚಿಂತನ್ ಹೇಳಿದರು.

mangaluru
ಪತ್ರಕರ್ತ ರಾ.ಚಿಂತನ್

By

Published : Feb 25, 2020, 9:10 PM IST

ಮಂಗಳೂರು: ನಗರದಲ್ಲಿ ನಡೆದ ಗೋಲಿಬಾರ್ ಪ್ರಕರಣದಲ್ಲಿ ಮಡಿದ ಜಲೀಲ್ ಮಗಳು ಮುಂದಿನ 20 ವರ್ಷಗಳ ಬಳಿಕ ಮಂಗಳೂರು ಪೊಲೀಸ್ ಕಮಿಷನರ್ ಆಗಬೇಕು. ಆಕೆಯನ್ನು ಎಲ್ಲರೂ ಸೇರಿ ಓದಿಸೋಣ. ಅವಳಲ್ಲಿ ಆಕ್ರೋಶವನ್ನು ಜೀವಂತವಾಗಿರಿಸೋಣ. ಇದು ಮಂಗಳೂರು ಗೋಲಿಬಾರ್ ಪ್ರಕರಣಕ್ಕೆ ಪ್ರತೀಕಾರವಾಗಲಿ. ಇದನ್ನು ಶಪಥವಾಗಿ ಸ್ವೀಕರಿಸೋಣ ಎಂದು ಪತ್ರಕರ್ತ ರಾ.ಚಿಂತನ್ ಹೇಳಿದರು.

ಪತ್ರಕರ್ತ ರಾ.ಚಿಂತನ್

ಮುಸ್ಲಿಂ ಐಕ್ಯತಾ ವೇದಿಕೆಯಿಂದ ಸಿಎಎ, ಎನ್ಆರ್​ಸಿ, ಎನ್ ಪಿಆರ್ ಕಾಯ್ದೆಯ ವಿರುದ್ಧ ನಗರದ ಕುದ್ರೋಳಿಯ ಟಿಪ್ಪು ಸುಲ್ತಾನ್ ಗಾರ್ಡನ್​ನಲ್ಲಿ ನಡೆದ 'ಕುದ್ರೋಳಿ ಚಲೋ' ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಗಳೇ ಅಂದು ಇದೇ ರೀತಿಯಲ್ಲಿ ಪ್ರತಿಭಟನೆಯಾದಾಗ ದಯವಿಟ್ಟು ಗುಂಡು ಹೊಡೆಯಬೇಡ. ಬದಲಾಗಿ ಹೂ ನೀಡು. ಇದು ನನ್ನ ಮನವಿ ಎಂದು ಹೇಳಿದರು. ಆಕೆಯ ಶಿಕ್ಷಣಕ್ಕೆ ಎಲ್ಲರೂ ಕೈಜೋಡಿಸಬೇಕಾಗಿದೆ. ಎಲ್ಲರೂ ಇದನ್ನು ಪ್ರತಿಜ್ಞೆಯಂತೆ ಸ್ವೀಕರಿಸಿ. ನಾನಂತೂ ಮಂಗಳೂರು ಗೋಲಿಬಾರ್ ಬಗ್ಗೆ ಬರೆದ ಕೃತಿಯಿಂದ ಬಂದ ಹಣದ ಒಂದು ಭಾಗವನ್ನು ಗೋಲಿಬಾರ್​ನಿಂದ ಬಲಿಯಾದ ಮತ್ತೋರ್ವನ ತಂಗಿಯ ವಿದ್ಯಾಭ್ಯಾಸಕ್ಕೆ ನೀಡುತ್ತೇನೆ‌ ಎಂದು ಹೇಳಿದರು.

ಭಾಷಣದ ಆರಂಭದಲ್ಲಿ, ಬಾನಂಗಳದಲ್ಲಿ ಹಾರುತ್ತಿರುವ ಕೇಸರಿ, ಬಿಳಿ, ಹಸಿರು ತ್ರಿವರ್ಣದ ಗಾಳಿಪಟವನ್ನು ತೋರಿಸಿ ಮಿಸ್ಟರ್​ ಮೋದಿ, ಮಿಸ್ಟರ್​ ಶಾ ಅದೇ ನನ್ನ ಪೌರತ್ವ ಎಂದು ಟಾಂಗ್ ನೀಡಿದ ಅವರು, ಪಾಕಿಸ್ತಾನ ಅಂದ್ರೆ ಕೇಸ್ ದಾಖಲಿಸಬೇಕಾದರೆ, ಮೂರು ಹೊತ್ತು ಪಾಕಿಸ್ತಾನವನ್ನು ನೆನಸಿಕೊಳ್ಳುವವರಿಗೆ ಕೇಸ್ ದಾಖಲಿಸಬೇಕು ಎಂದು ಪರೋಕ್ಷವಾಗಿ ಹೇಳಿದರು.

ಇತ್ತೀಚೆಗೆ ಫ್ರೀಡಂ ಪಾರ್ಕ್​ನಲ್ಲಿ ಅಮೂಲ್ಯ ಲಿಯೋನ್ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಹೇಳಿದ ಮರುದಿನವೇ 13 ಮಂದಿ ನೌಕಾಪಡೆಯ ಸೈನಿಕರು ಬೇಹುಗಾರಿಕೆ ಮಾಹಿತಿ ನೀಡಿದವರ ಅವರ ಸುದ್ದಿ ಯಾಕೆ ಆಗಿಲ್ಲ. ಸಂವಿಧಾನ ಬದಲಾಯಿಸಬೇಕು ಎನ್ನುವವರು, ಪಾರ್ಲಿಮೆಂಟ್​ನಲ್ಲಿ ಗೋಡ್ಸೆಗೆ ಜೈ ಅನ್ನುವವರು ಪಾಕಿಸ್ತಾನ ಜಿಂದಾಬಾದ್ ಹೇಳುವವರಂತೆ ದೇಶದ್ರೋಹಿಗಳು ಎಂದು ಹೇಳಿದರು.

ಇನ್ನಾದರೂ ಮುಸಲ್ಮಾನರೆಂದರೆ ಐಎಎಸ್, ಐಪಿಎಸ್, ಯೋಧರು ಎಂಬ ಟ್ರೆಂಡ್ ಸೃಷ್ಟಿಯಾಗಬೇಕು. ಶಾಸಕಾಂಗ, ಕಾರ್ಯಾಂಗದಲ್ಲಿಯೂ ಮುಂದಕ್ಕೆ ಮುಸ್ಲಿಮರ ಹೆಸರು ಕೇಳಿ ಬರಬೇಕು. ಭಾರತದ ಮುಸ್ಲಿಮರ ಜನಸಂಖ್ಯೆಯನ್ನು ನೋಡಿದರೆ ಈಗ ಬಹಳಷ್ಟು ಎಂಪಿ, ಎಂಎಲ್​ಎಗಳು ಇರಬೇಕಿತ್ತು. 70 ವರ್ಷಗಳಿಂದ ಮುಸ್ಲಿಮರಿಗೆ ರಾಜಕೀಯದಲ್ಲಿ ಅವಕಾಶ ನೀಡುತ್ತಿದ್ದರೆ ಇಂದು ಮೋದಿ ಸರಕಾರದಲ್ಲಿ ನೂರಕ್ಕಿಂತಲೂ ಅಧಿಕ ಎಂಪಿಗಳಿರುತ್ತಿದ್ದರು‌. ಮನೆಗೊಬ್ಬ ಐಪಿಎಸ್, ಐಎಎಸ್ ಮಾಡಿ. ಇಲ್ಲಿ ಇರುವ ಬಾವುಟಗಳನ್ನು ನಿಮ್ಮ ಮನೆಮುಂದೆ ಹಾರಿಸಿ, ಯಾರಾದರೂ ದಾಖಲೆಗಳನ್ನು ಕೇಳಿಕೊಂಡು ಬಂದಾಗ ಅವರನ್ನು ಅಂಗಳಕ್ಕೆ ಕರೆದು ಅದೇ ನನ್ನ ಪೌರತ್ವ, ಇದೇ ನನ್ನ ಭಾರತ ಎಂದು ಅವರಿಗೆ ಹೇಳಿ ಎಂದು ಅವರು ಹೇಳಿದರು.

ABOUT THE AUTHOR

...view details