ಮಂಗಳೂರು: ದೆಹಲಿಯಲ್ಲಿ 45 ಜನರ ಸಾವಿಗೆ ಕಾರಣವಾದ ಹಿಂಸಾಚಾರದ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲರಾದ ಗೃಹಸಚಿವ ಅಮಿತ್ ಶಾ ಮತ್ತು ಅಮೆರಿಕ ಅಧ್ಯಕ್ಷ ಟ್ರಂಪ್ ಅವರಿಗೆ ನೈಜ ಭಾರತ ತೋರಿಸಲು ನಾಚಿಕೆಪಟ್ಟು ಕೃತಕ ಭಾರತ ತೋರಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜೀನಾಮೆ ನೀಡಲಿ ಎಂದು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಇಂದು ಅಘೋಷಿತ ತುರ್ತು ಪರಿಸ್ಥಿತಿ ಇದೆ. ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ವಿರುದ್ದ ಆಕ್ರೋಶ ಹೆಚ್ಚಿದೆ. ದೇಶದಲ್ಲಿ ಈಗ ಎರಡನೇ ಸ್ವಾತಂತ್ರ್ಯ ಹೋರಾಟ ನಡೆಯುತ್ತಿದೆ. ಸಂವಿಧಾನದ ಬಗ್ಗೆ ಯಾರಿಗೂ ಗೌರವವಿಲ್ಲ ಎಂಬ ನಡವಳಿಕೆ ಕಾಣುತ್ತಿದೆ. ಮೋದಿ ಸರ್ಕಾರ ದೇಶದ ಜನರ ನೆಮ್ಮದಿ ಕಸಿದುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡ ಐವನ್ ಡಿಸೋಜ ಮಾತನಾಡಿದರು. ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಭಾರತಕ್ಕೆ ಬಂದಾಗ ಕೊಳೆಗೇರಿ ಪ್ರದೇಶಗಳು ಕಾಣದಂತೆ ಗೋಡೆ ನಿರ್ಮಾಣ ಮಾಡಲಾಯಿತು. ನೈಜ ಭಾರತ ತೋರಿಸಲು ಪ್ರಧಾನ ಮಂತ್ರಿಗಳು ನಾಚಿಕೆಪಟ್ಟು, ಕೃತಕ ಭಾರತವನ್ನು ಅಮೆರಿಕಾಧ್ಯಕ್ಷರಿಗೆ ತೋರಿಸಿದರು. ಅವರಿಗೆ ಪ್ರಧಾನಮಂತ್ರಿ ಸ್ಥಾನದಲ್ಲಿರಲು ನೈತಿಕ ಹಕ್ಕಿಲ್ಲ. ಹಾಗಾಗಿ ಕೂಡಲೇ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಸಿಎಎ, ಎನ್‌ಆರ್‌ಸಿ ರಾಜ್ಯದಲ್ಲಿ ಜಾರಿ ಮಾಡಬಾರದು ಎಂದು ವಿಧಾನಮಂಡಲದಲ್ಲಿ ಚರ್ಚಿಸಲು ಪ್ರತಿಪಕ್ಷ ನೋಟೀಸ್ ನೀಡಿದೆ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲಾಗುವುದು ಮತ್ತು ದೊರೆಸ್ವಾಮಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಬಸನಗೌಡ ಪಾಟೀಲ ಯತ್ನಾಳ್ ಕ್ಷಮೆಯಾಚಿಸದಿದ್ದರೆ ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಅಧಿವೇಶನದಲ್ಲಿ ಒತ್ತಾಯಿಸಲಾಗುವುದು ಎಂದು ತಿಳಿಸಿದರು.